ADVERTISEMENT

ಗೌರಿಬಿದನೂರು: ಖಾಸಗಿ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:03 IST
Last Updated 29 ಸೆಪ್ಟೆಂಬರ್ 2025, 6:03 IST
<div class="paragraphs"><p>ಗೌರಿಬಿದನೂರು ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್‌ ನಿಲ್ದಾಣ ಇಲ್ಲ.</p></div>

ಗೌರಿಬಿದನೂರು ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್‌ ನಿಲ್ದಾಣ ಇಲ್ಲ.

   

ಗೌರಿಬಿದನೂರು: ತಾಲ್ಲೂಕಿನ ಕೇಂದ್ರಸ್ಥಾನದಲ್ಲಿ ಖಾಸಗಿ ಬಸ್‌ ನಿಲ್ದಾಣ ಇಲ್ಲದೆ ಪ್ರಯಾಣಿಕರು ಹೈರಾಣಾಗಿದ್ದಾರೆ.

ಖಾಸಗಿ ಬಸ್ ನಿಲ್ಲಲು ಪ್ರತ್ಯೇಕ ಬಸ್ ನಿಲ್ದಾಣವಿಲ್ಲದೆ ಪಾದಚಾರಿ ಮಾರ್ಗವನ್ನೇ ಖಾಸಗಿ ಬಸ್ ನಿಲ್ದಾಣವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ನಗರದ ಎಂಜಿ ಮುಖ್ಯರಸ್ತೆ ಸುತ್ತಮುತ್ತ ನಿತ್ಯವೂ ಸಂಚಾರ ದಟ್ಟಣೆ ಆಗಿ ಜನರ ಓಡಾಟಕ್ಕೆ ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಹಿಳೆಯರು, ಮಕ್ಕಳು, ವೃದ್ಧರು ಪ್ರಾಣ ಭಯದಲ್ಲಿ ಓಡಾಡುವಂತಾಗಿದೆ ಎಂದು ಜನರ ಅಳಲು.

ADVERTISEMENT

ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ನಗರ ಸೇರಿದಂತೆ ರಾಜ್ಯದ ವಿವಿಧ ಯಾತ್ರಾ ಸ್ಥಳಗಳಿಗೆ ದಿನ ನಿತ್ಯ 50ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಆದರೆ ಇಲ್ಲಿ ಪ್ರಯಾಣಿಕರಿಗೆ ಬಸ್ ನಿಲ್ದಾಣವಿಲ್ಲ, ಕೂರಲು ಜಾಗವಿಲ್ಲ, ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಇದ್ದರೂ ಒಳಗೆ ಹೋಗಲು ಆಗದಷ್ಟು ಅಧ್ವಾನವಾಗಿದೆ.

ಹೀಗೆ ಹಲವು ಮೂಲ ಸೌಕರ್ಯಗಳ ಕೊರತೆ ಪ್ರಯಾಣಿಕರನ್ನು ಕಾಡುತ್ತಿವೆ. ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ಲಗೇಜ್‌ ಜೊತೆಗೆ ಮಕ್ಕಳನ್ನು ಕರೆದುಕೊಂಡು ಬರುವ ವೃದ್ಧರು, ಮಹಿಳೆಯರು ಅಂಗಡಿ ಮುಂಗಟ್ಟುಗಳ ಮುಂದೆ ರಕ್ಷಣೆ ಪಡೆಯಲು ನಿಂತರೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಪ್ರಯಾಣಿಕರನ್ನು ವ್ಯಾಪಾರಿಗಳು ಗದರಿಸಿ ಎಬ್ಬಿಸುತ್ತಾರೆ. 

ಖಾಸಗಿ ಬಸ್‌ಗಳನ್ನು ನಿಲ್ಲಿಸುವ ಜಾಗದ ಪಕ್ಕದಲ್ಲಿಯೇ ತಳ್ಳುವ ಗಾಡಿಗಳಲ್ಲಿ ಹಣ್ಣು, ಹೂವಿನ ಮಾರುಕಟ್ಟೆ, ಹೋಟೆಲ್ ಇದೆ. ಇದಕ್ಕೆ ಹೊಂದಿಕೊಂಡಂತೆ ಭಾನುವಾರದಂದು ಸಂತೆ ನಡೆಯುತ್ತದೆ. ಸರಕು ಕೊಳ್ಳಲು ಬರುವ ಗ್ರಾಹಕರು ಹಾಗೂ ವ್ಯಾಪಾರಿಗಳು ಜಾಗದ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಇಲ್ಲಿ ಪ್ರಯಾಣಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಅಂಗಡಿಗಳಲ್ಲಿ ಖರೀದಿ ಮಾಡಿ ನೀರು ಕುಡಿಯುವ ಸ್ಥಿತಿ ಇದೆ. ಇಲ್ಲಿ ಡಾಂಬರು ಕಿತ್ತು ಹೋಗಿ ವರ್ಷಗಳೇ ಕಳೆದಿವೆ. ಇಂತಹ ಜಾಗದಲ್ಲಿ ಬಸ್ ಬಂದು ನಿಲ್ಲುತ್ತವೆ. ಬೇಸಿಗೆಯಲ್ಲಿ ದೂಳಿನ ಸಮಸ್ಯೆ ಕಾಡಿದರೆ ಮಳೆಗಾಲದಲ್ಲಿ ಕೆಸರು ತುಂಬಿ ಕಾಲಿಡಲಾರದಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಗೌರಿಬಿದನೂರು ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್‌ ನಿಲ್ದಾಣ ಇಲ್ಲ

ಯಾವುದೇ ಕೆಲಸವಾಗಿಲ್ಲ

ಖಾಸಗಿ ಬಸ್ ನಿಲ್ಲುವ ಸ್ಥಳದಲ್ಲಿ ಹಳೆಯ ಕಟ್ಟಡಗಳಿದ್ದು ಇವುಗಳನ್ನು ಕೆಡವಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡುವಷ್ಟು ಜಾಗ ಇದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ ಈವರೆಗೂ ಯಾವುದೇ ಕೆಲಸವಾಗಿಲ್ಲ.

ಮಂಜುನಾಥ್, ಅಂಗಡಿ ಮಾಲಿಕ

ಅಪಘಾತವಾಗುವ ಭಯ

ಖಾಸಗಿ ಬಸ್‌ಗಳು ಪಾದಚಾರಿ ಮಾರ್ಗದಲ್ಲಿ ನಿಲ್ಲುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಪಾದಚಾರಿಗಳು ರಸ್ತೆ ಮಧ್ಯೆ ನಡೆದು ಹೋಗುವ ಅನಿವಾರ್ಯತೆ ಎದುರಾಗಿದ್ದು, ವೇಗವಾಗಿ ಬರುವ ವಾಹನಗಳಿಂದ ಅಪಘಾತವಾಗುವ ಭಯ ಕಾಡುತ್ತಿದೆ.

ಮೇಘನಾ, ಖಾಸಗಿ ಕಂಪನಿ ಉದ್ಯೋಗಿ

ಪ್ರತ್ಯೇಕ ಸ್ಥಳ ಮೀಸಲಿರಿಸಿ

ರಸ್ತೆಯಲ್ಲಿಯೇ ಬಸ್‌ ನಿಲುಗಡೆ ಮಾಡುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಕರು ಬಸ್‌ ಹತ್ತಿ ಇಳಿಯಬೇಕು. ಹೀಗಾಗಿ ಬಸ್ ನಿಲುಗಡೆಗಾಗಿ ಪ್ರತ್ಯೇಕ ಸ್ಥಳ ಮೀಸಲಿರಿಸಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ನಾರಾಯಣ ಸ್ವಾಮಿ, ಪ್ರಯಾಣಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.