ADVERTISEMENT

ಬಾಗೇಪಲ್ಲಿ: ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 3:01 IST
Last Updated 24 ಮಾರ್ಚ್ 2021, 3:01 IST
ಬಾಗೇಪಲ್ಲಿ ಡಿಸಿಸಿ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಕಾರ ಸಂಘಗಳಲ್ಲಿನ ಠೇವಣಿ ಹಣವನ್ನು ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರವರಿಗೆ ಹಸ್ತಾಂತರಿಸಿದರು
ಬಾಗೇಪಲ್ಲಿ ಡಿಸಿಸಿ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಕಾರ ಸಂಘಗಳಲ್ಲಿನ ಠೇವಣಿ ಹಣವನ್ನು ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರವರಿಗೆ ಹಸ್ತಾಂತರಿಸಿದರು   

ಬಾಗೇಪಲ್ಲಿ: ತಾಲ್ಲೂಕಿನ ಕಟ್ಟಕಡೆಯ ಬಡರೈತರಿಗೆ ಹಾಗೂ ಮಹಿಳೆಯರಿಗೆ ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡಲು ಎಲ್ಲಾ ಸಹಕಾರ ಸಂಘಗಳ ಕಾರ್ಯದರ್ಶಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಕರೆ ನೀಡಿದರು.

ಪಟ್ಟಣದ ಡಿಸಿಸಿ ಬ್ಯಾಂಕಿನ ಆವರಣದಲ್ಲಿ ಮಂಗಳವಾರ ಡಿಸಿಸಿ ಬ್ಯಾಂಕಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಖೆಯ ಅಧಿಕಾರಿಗಳ ಹಾಗೂ ಸಹಕಾರ ಸಂಘಗಳ ಅಧ್ಯಕ್ಷರ, ಕಾರ್ಯದರ್ಶಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಬಾಗೇಪಲ್ಲಿಯಂತಹ ಅತಿ ಹಿಂದುಳಿದ ತಾಲ್ಲೂಕಿನ ರೈತರಿಗೆ, ಮಹಿಳೆಯರ ಅಭಿವೃದ್ಧಿಗೆ ₹100 ಕೋಟಿ ಸಾಲಸೌಲಭ್ಯ ನೀಡುತ್ತೇನೆ ಎಂದು ಹೇಳಿದ್ದೆ. ಇದೀಗ ಸಂಘಗಳ ರೈತರಿಗೆ, ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡಲಾಗಿದೆ. ತಾಲ್ಲೂಕಿನಲ್ಲಿ 30 ಸಾವಿರ ಮಂದಿ ರೈತರು ಇದ್ದಾರೆ. ಕೆಲ ರೈತರಿಗೆ ಮಾತ್ರ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಉಳಿದಂತೆ ಕೆಲ ರೈತರಿಗೆ ಬಡ್ಡಿರಹಿತದ ಸಾಲ ಸೌಲಭ್ಯದ ಬಗ್ಗೆ ಗೊತ್ತಿಲ್ಲ. ಕೆಲವರು ಪ್ರಾಮಾಣಿಕವಾಗಿ ಸಾಲ ಪಡೆದು, ಕಟ್ಟುವವರು ಇದ್ದಾರೆ. ಮಾಹಿತಿ ಕೊರತೆ ಇದೆ. ಇದರಿಂದ ಎಲ್ಲಾ ಸಂಘಗಳ ಕಾರ್ಯದರ್ಶಿಗಳು ರೈತರ ಮನೆಗಳಿಗೆ ಭೇಟಿ ನೀಡಿ, ಬ್ಯಾಂಕಿನಿಂದ ನೀಡುವ ಸಾಲ ಸೌಲಭ್ಯದ ಬಗ್ಗೆ ಜನಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ADVERTISEMENT

ಏಪ್ರಿಲ್ 1 ರಿಂದ ಬ್ಯಾಂಕಿನ ಎಲ್ಲಾ ಅಧಿಕಾರಿಗಳು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯವರು ಚುರುಕಾಗಿ ಕೆಲಸ ಮಾಡಬೇಕು. ಕರ್ತವ್ಯಲೋಪ ಮಾಡುವ ಸಿಬ್ಬಂದಿಯನ್ನು ಎಂದಿಗೂ ಕ್ಷಮಿಸುವುದಿಲ್ಲ. ರೈತರಿಗೆ, ಮಹಿಳೆಯರ ಗುಂಪುಗಳಿಗೆ ಬ್ಯಾಂಕಿನಿಂದ ಎಷ್ಟು ಬೇಕಾದರೂ ಸಾಲ ಸೌಲಭ್ಯ ಕೊಡಲು ಸಿದ್ಧ ಇದ್ದೇವೆ. ಆದರೆ ಕೆಲ ಕಾರ್ಯದರ್ಶಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇಂತಹವರಿಗೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಇದೆ ಎಂದು ಎಚ್ಚರಿಸಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕ ವಿ.ವೆಂಕಟಾಶಿವಾರೆಡ್ಡಿ ಮಾತನಾಡಿ, ‘ತಾಲ್ಲೂಕಿನ ಕೆಲ ಸಹಕಾರ ಸಂಘಗಳ ಕಾರ್ಯದರ್ಶಿಗಳು ರೈತರಿಗೆ, ಮಹಿಳೆಯರಿಗೆ ಸಾಲ ಸೌಲಭ್ಯ ವಿತರಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಿಲ್ಲ. ಅನೇಕ ಬಾರಿ ಹೇಳಿದ್ದೇನೆ’ ಎಂದು ಸಹಕಾರ ಸಂಘಗಳ ಕೆಲ ಕಾರ್ಯದರ್ಶಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಹಕಾರ ಸಂಘಗಳಲ್ಲಿನ ₹2 ಕೋಟಿ ಠೇವಣಿ ಹಣವನ್ನು ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದೇಗೌಡರವರಿಗೆ ಹಸ್ತಾಂತರಿಸಿದರು.

ಪ್ರಗತಿಪರಿಶೀಲನಾ ಸಭೆಯಲ್ಲಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಎ.ನಾಗರಾಜು, ನಿರ್ದೇಶಕ ವಿ.ವೆಂಕಟಾಶಿವಾರೆಡ್ಡಿ, ಕೇಂದ್ರ ಕಚೇರಿಯ ಉಪ ವ್ಯವಸ್ಥಾಪಕ ಕಲೀಂವುಲ್ಲಾ, ಠೇವಣಿ ವಿಭಾಗದ ವ್ಯವಸ್ಥಾಪಕ ಹುಸೇನ್ ಸಾಬ್ ದೊಡ್ಡಮನಿ, ಡಿಸಿಸಿ ಬ್ಯಾಂಕಿನ ಶಾಖೆಯ ವ್ಯವಸ್ಥಾಪಕ ಸಿ.ಎಸ್.ಚೇತನ್, ಮೇಲ್ವಿಚಾರಕ ಆಂಜನೇಯರೆಡ್ಡಿ, ಸೊಸೈಟಿಗಳ ಅಧ್ಯಕ್ಷರಾದ ಸಿ.ಎನ್.ಬಾಬುರೆಡ್ಡಿ, ನಂಜುಂಡ, ಕಾಮಿರೆಡ್ಡಿ, ಬೈಪರೆಡ್ಡಿ, ಮಂಜುನಾಥರೆಡ್ಡಿ, ಚಂದ್ರಶೇಖರರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.