ADVERTISEMENT

ಚಿಕ್ಕಬಳ್ಳಾಪುರ | ದಾಖಲೆರಹಿತರಿಗೆ ಮನೆ ಹಕ್ಕುಪತ್ರ: ಜಿಲ್ಲಾಧಿಕಾರಿ ಪ್ರಭು ಸೂಚನೆ

ವಾರದೊಳಗೆ ದಾಖಲೆ ರಹಿತ ಜನವಸತಿಗಳ ಗುರುತಿಸಲು ಜಿಲ್ಲಾಧಿಕಾರಿ ಜಿ. ಪ್ರಭು ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:23 IST
Last Updated 22 ಜನವರಿ 2026, 5:23 IST
ಜಿ.ಪ್ರಭು
ಜಿ.ಪ್ರಭು   

ಚಿಕ್ಕಬಳ್ಳಾಪುರ: ಕನಿಷ್ಠ 10 ಮನೆಗಳಲ್ಲಿ ವಾಸವಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಒಂದು ವಾರದ ಒಳಗೆ ನಿಖರವಾಗಿ ಗುರುತಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ‘ಕಂದಾಯ ಗ್ರಾಮ ಅಭಿಯಾನ’ದ ಪೂರ್ವ ಸಿದ್ಧತಾ ವಿಡಿಯೊ ಸಂವಾದ ಸಭೆಯಲ್ಲಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಕೆಲವು ಕುಟುಂಬಗಳಿಗೆ ಶಾಶ್ವತ ನೆಲೆ ಇಲ್ಲ. ಸರ್ಕಾರ ಕಂದಾಯ ಗ್ರಾಮ ಅಭಿಯಾನ ಕೈಗೆತ್ತಿಗೊಂಡು ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಮುಂದಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಈ ಅಭಿಯಾನವನ್ನು ಕರಾರುವಕ್ಕಾಗಿ ನಿಗದಿತ ಏಳು ದಿನಗಳ ಒಳಗಾಗಿ ಈಗಿರುವ ಗ್ರಾಮಗಳು, ಕಂದಾಯ ಗ್ರಾಮಗಳನ್ನು ಹೊರತುಪಡಿಸಿ ದಾಖಲೆ ಇಲ್ಲದೆ ವಾಸ ಮಾಡುತ್ತಿರುವ ಜನವಸತಿ ಪ್ರದೇಶಗಳನ್ನು ಗುರುತಿಸಬೇಕು ಎಂದು ಹೇಳಿದರು.

ADVERTISEMENT

ಕಂದಾಯ ಇಲಾಖೆ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಸರ್ವೆ ಇಲಾಖೆಗಳು ಸಮನ್ವಯ ಸಾಧಿಸಿ ಈ ಕಾರ್ಯವನ್ನು ಹೆಚ್ಚು ಅರ್ಥಪೂರ್ಣವಾಗಿ ಹಾಗೂ ಸಮರ್ಪಕವಾಗಿ ಮಾಡಬೇಕು ಎಂದು ನಿರ್ದೇಶನ ನೀಡಿದರು. 

ಜಿಲ್ಲೆಯಲ್ಲಿ ಪ್ರಸ್ತುತ 1,522 ಮೂಲ ಕಂದಾಯ ಗ್ರಾಮಗಳಿವೆ. ಈ ಪೈಕಿ 344 ಗ್ರಾಮಗಳನ್ನು ಕಂದಾಯ ಗ್ರಾಮ, ಉಪಗ್ರಾಮ ಹಾಗೂ ಗ್ರಾಮ ಠಾಣಾ ವಿಸ್ತರಣೆ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳನ್ನು ಹೊರತುಪಡಿಸಿ ಬಾಕಿ ಇರುವ ದಾಖಲೆ ರಹಿತ ಜನ ವಸತಿಗಳನ್ನು ಗುರುತಿಸುವ ಕೆಲಸ ಜಿಲ್ಲೆಯಲ್ಲಿ ತ್ವರಿತವಾಗಿ ಆಗಬೇಕಿದೆ ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಗಳು, ಕಟ್ಟಡಗಳು ಮತ್ತು ಪ್ರದೇಶಗಳನ್ನೂ ಸೇರಿಸಿಕೊಂಡು ಕನಿಷ್ಠ 10 ದಾಖಲೆ ರಹಿತ ಮನೆಗಳು ಇದ್ದಲ್ಲಿ ಆ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಮೇಲಧಿಕಾರಿಗಳಿಗೆ ಸಲ್ಲಿಸಬೇಕು. ಈ ಬಗ್ಗೆ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಪಿಡಿಒಗಳಿಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡಬೇಕು. ಯಾದೃಚ್ಛಿಕವಾಗಿ ಕ್ಷೇತ್ರ ವೀಕ್ಷಣೆ ಮಾಡಿ ಮೇಲುಸ್ತುವಾರಿ ಮಾಡಬೇಕು ಎಂದು ಸೂಚಿಸಿದರು.

ದಾಖಲೆ ರಹಿತ ಜನವಸತಿಗಳನ್ನು ಗುರುತಿಸುವಾಗ ತಾಂತ್ರಿಕ ಸಹಾಯ ಪಡೆದುಕೊಳ್ಳಬೇಕು. ಕಳೆದ 15 ವರ್ಷಗಳ ಉಪಗ್ರಹ ಆಧಾರಿತ ಭಾವಚಿತ್ರಗಳನ್ನು ಪರಿಶೀಲಿಸಬೇಕು. ಕಳೆದ 10 ರಿಂದ 15 ವರ್ಷಗಳಿಂದ ಅಂತಹ ಜನ ವಸತಿಗಳಲ್ಲಿ ಜನರು ವಾಸ ಮಾಡುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಶಾಶ್ವತವಾಗಿ ವಾಸಿಸಲು ಇಚ್ಛೆಪಟ್ಟು ಕಟ್ಟಡಗಳು, ಮನೆಗಳನ್ನು ಶಾಶ್ವತವಾಗಿ ನಿರ್ಮಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಬೇಕು. ತಾತ್ಕಾಲಿಕವಾಗಿ ನಿರ್ಮಿಸಿರುವ ಕಚ್ಚಾ ಮನೆಗಳನ್ನು ಪರಿಗಣಿಸಬಾರದು. ನಿಜವಾಗಿಯೂ ಅರ್ಹರಿರುವವರಿಗೆ ಹಕ್ಕುಪತ್ರಗಳನ್ನು ವಿತರಣೆ ಆಗುವ ರೀತಿಯಲ್ಲಿ ಕಾನೂನು ರೀತಿ ಕ್ರಮವಹಿಸಬೇಕು ಎಂದು ತಹಶೀಲ್ದಾರರು ಮತ್ತು ಪಿಡಿಒಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಭೂ ದಾಖಲೆಗಳ ಉಪನಿರ್ದೇಶಕ ಮಂಜುನಾಥ ತವಣೆ, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸರ್ವೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು. 

‘ನಾಗರಿಕರು ಮಾಹಿತಿ ನೀಡಿ’

ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಸುತ್ತೋಲೆಗಳು ಸಿದ್ಧವಾಗಿವೆ. 10ಕ್ಕಿಂತ ಕಡಿಮೆ ಮನೆಗಳಿದ್ದ ಒಂದು ಮಾದರಿಯ ನಮೂನೆ ಮತ್ತು 10ಕ್ಕಿಂತ ಹೆಚ್ಚು ಮನೆಗಳಿದ್ದರೆ ಮತ್ತೊಂದು ಮಾದರಿಯ ನಮೂನೆಯಲ್ಲಿ ಮಾಹಿತಿ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು. ‘ಒಂದು ವಾರದಲ್ಲಿ ಎಷ್ಟು ಕಂದಾಯ ಉಪಗ್ರಾಮಗಳು ಇವೆ ಎನ್ನುವುದು ದೃಢವಾಗುತ್ತದೆ. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ಮುಖ್ಯವಾಗಿ ನಾಗರಿಕರು ಜನಪ್ರತಿನಿಧಿಗಳು ಈ ಬಗ್ಗೆ ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು. ಖಾಸಗಿ ಜಾಗಗಳಲ್ಲಿ ಮನೆಗಳು ಇದ್ದರೆ ನ್ಯಾಯಾಲಯದ ವ್ಯಾಜ್ಯಗಳು ಇರುತ್ತದೆ. ಆದರೆ ಈ ಅಭಿಯಾನದಲ್ಲಿ ಮಾಹಿತಿ ನೀಡಿದರೆ ತಕ್ಷಣವೇ ತಮ್ಮ ಮನೆಯ ಮಾಲೀಕತ್ವ ಹೊಂದಲು ಅವಕಾಶಗಳಾಗುತ್ತವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.