ADVERTISEMENT

ಚಿಕ್ಕಬಳ್ಳಾಪುರಕ್ಕೆ 2 ಆಸ್ಪತ್ರೆ ಪ್ರಸ್ತಾವನೆ ಮುಂದಿಟ್ಟ ಸುಧಾಕರ್: ಆಕ್ಷೇಪ

ಸಚಿವ ಸಂಪುಟ ಸಭೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 4:47 IST
Last Updated 26 ನವೆಂಬರ್ 2021, 4:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆ ಮತ್ತು ಸಿಬ್ಬಂದಿಗೆ ವಸತಿ ನಿಲಯ ಸ್ಥಾಪಿಸಬೇಕೆಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ಪ್ರಸ್ತಾವನೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಗುರುವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮುಂದಿಟ್ಟ ಆರೋಗ್ಯ ಸಚಿವ ಡಾ.ಕೆ. ಸುಧಾಕರ್,ಗೌರಿಬಿದನೂರು ಆಸ್ಪತ್ರೆ ಜತೆಗೆ, ತಮ್ಮ ಉಸ್ತುವಾರಿ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಹೊಸ ತಾಲ್ಲೂಕು ಆಸ್ಪತ್ರೆ, ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿಯ ಪ್ರಸ್ತಾವನೆಗಳನ್ನೂ ಮಂಡಿಸಿದರು.

ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಆಕ್ಷೇಪ ಎತ್ತಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕ್ರೀಡಾ ಸಚಿವ ನಾರಾಯಣಗೌಡ, ‘ನಿಮ್ಮ ಜಿಲ್ಲೆಗೆ ಎಲ್ಲವನ್ನು ತೆಗೆದುಕೊಂಡು ಹೋದರೆ ನಾವು ಏನು ಮಾಡಬೇಕು. ಯಡಿಯೂರಪ್ಪ ಅವಧಿಯಲ್ಲಿ ನಿಮ್ಮ ಜಿಲ್ಲೆಗೆ ವೈದ್ಯಕೀಯ ಕಾಲೇಜು, ಈಗ ಆಸ್ಪತ್ರೆ ಪಡೆದುಕೊಳ್ಳುತ್ತಿದ್ದೀರಿ. ಇದು ಸರಿಯಲ್ಲ. ಎಲ್ಲ ಜಿಲ್ಲೆಗಳಿಗೂ ನ್ಯಾಯ ಒದಗಿಸಬೇಕು’ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

ADVERTISEMENT

ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಂ.ಟಿ.ಬಿ.ನಾಗರಾಜ್‌, ಜೆ.ಸಿ.ಮಾಧುಸ್ವಾಮಿ ಸೇರಿ ಹಲವರು ಧ್ವನಿಗೂಡಿಸಿದರು. ಪ್ರತಿರೋಧ ಹೆಚ್ಚಾಗುತ್ತಿರುವುದನ್ನು ನೋಡಿದ ಮುಖ್ಯಮಂತ್ರಿ ಬೊಮ್ಮಾಯಿ ವಿಷಯ ತಡೆ ಹಿಡಿಯಲು ಮುಂದಾದರು. ಆಗ ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ತಡೆ ಹಿಡಿದರೆ ತಪ್ಪು ಸಂದೇಶ ಹೋಗುತ್ತದೆ. ಉಳಿದ ಸಚಿವರಿಂದ ಪ್ರಸ್ತಾವನೆ ತರಿಸಿಕೊಳ್ಳಿ ಎಂದು ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.