ADVERTISEMENT

ಶಿಡ್ಲಘಟ್ಟ| ಮೌನಿಕ ಸಾವಿಗೆ ಆಕ್ರೋಶ; ಡಿ.ಸಿ ಕಚೇರಿಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 10:17 IST
Last Updated 7 ಮಾರ್ಚ್ 2023, 10:17 IST
ಶಿಡ್ಲಘಟ್ಟ ವೈದ್ಯರ ನಿರ್ಲಕ್ಷ್ಯದಿಂದ ಮೌನಿಕಾ ಮೃತಪಟ್ಟಿದ್ದು ಇದಕ್ಕೆ ಕಾರಣರಾದ ವೈದ್ಯರು ಮತ್ತು ಶುಶ್ರೂಷಕರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು
ಶಿಡ್ಲಘಟ್ಟ ವೈದ್ಯರ ನಿರ್ಲಕ್ಷ್ಯದಿಂದ ಮೌನಿಕಾ ಮೃತಪಟ್ಟಿದ್ದು ಇದಕ್ಕೆ ಕಾರಣರಾದ ವೈದ್ಯರು ಮತ್ತು ಶುಶ್ರೂಷಕರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು   

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ: ಶಿಡ್ಲಘಟ್ಟ ವೈದ್ಯರ ನಿರ್ಲಕ್ಷ್ಯದಿಂದ ಮೌನಿಕಾ ಮೃತಪಟ್ಟಿದ್ದು ಇದಕ್ಕೆ ಕಾರಣರಾದ ವೈದ್ಯರು ಮತ್ತು ಸಿಬ್ಬಂದಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಈ ಧರೆ ಸಮತಾ ಸೇನೆ, ರೈತ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮಾನವ ಹಕ್ಕುಗಳು ಮತ್ತು ಸಂಸ್ಕೃತಿ ರಕ್ಷಣಾ ಸಮಿತಿ ಹಾಗೂ ಮೌನಿಕ ಕುಟುಂಬ ಸದಸ್ಯರು ಶಿಡ್ಲಘಟ್ಟದಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಪಾದಯಾತ್ರೆ ನಡೆಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮದ ಎ.ಎನ್.ಮಧು ಅವರ ಪತ್ನಿ ಮೌನಿಕ ಹೆರಿಗೆ ನೋವಿನಿಂದ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ. ರಕ್ತಸ್ರಾವ ಆದಾಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು ಮೌನಿಕ ಮೃತಪಟ್ಟಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಒಂದು ವಾರದ ಒಳಗೆ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ಸಾವಿಗೆ ಕಾರಣರಾದ ವೈದ್ಯರು ಮತ್ತು ಸಿಬ್ಬಂದಿ ವಜಾಗೊಳಿಸಬೇಕು. ಜಿಲ್ಲಾ ಆಸ್ಪತ್ರೆಯ ಕರ್ತವ್ಯ ಲೋಪದ ಬಗ್ಗೆಯೂ ಕ್ರಮವಹಿಸಬೇಕು. ಮೌನಿಕ ಹೆಸರಿನಲ್ಲಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ ತೆರೆಯಬೇಕು. ಮೌನಿಕ ಕುಟುಂಬ ಸದಸ್ಯರಿಗೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ನ್ಯಾಯ ದೊರೆಯದಿದ್ದರೆ ವಿಧಾನಸೌಧ ಚಲೊ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಈ ಧರೆ ಸಮತಾ ಸೇನೆ ಅಧ್ಯಕ್ಷ ಈ ಧರೆ ತಿರುಮಲ ಪ್ರಕಾಶ್ ಮಾತನಾಡಿ, ವೈದ್ಯರ ಅನುಪಸ್ಥಿತಿಯಲ್ಲಿ ಹೆರಿಗೆ ಮಾಡಿಸಲು ಮುಂದಾದ ದಾದಿಯರು, ಮೊಬೈಲ್ ಮಾರ್ಗದರ್ಶನ ಮೂಲಕ ಹೆರಿಗೆ ಮಾಡಲು ಮುಂದಾದರಿಂದಲೇ ಸಾವಿಗೀಡಾಗಿದ್ದಾರೆ. ಈ ಪ್ರಕರಣ ತನಿಖಾ ವರದಿ ಬಹಿರಂಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್, ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸುವುದಾಗಿ ಭರವಸೆ ನೀಡಿದರು.

ಸಂದೀಪ್, ವೆಂಕಟರಮಣಪ್ಪ, ಎಚ್‌.ಆರ್.ಸಂದೀಪ್, ಭಾಗ್ಯ, ಶೋಭಾ, ಮಹೇಶ್, ನರಸಿಂಹಪ್ಪ, ಮುನಿಕೃಷ್ಣಪ್ಪ, ಮಮತಾ, ಮುನಿರಾಜು, ಸ್ವಪ್ನ, ಅಬ್ಲೂಡು ಮಧು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.