ADVERTISEMENT

ಬಾಗೇಪಲ್ಲಿ: ಭಯೋತ್ಪಾದಕರ ದಾಳಿ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:32 IST
Last Updated 14 ಮೇ 2025, 15:32 IST
ಬಾಗೇಪಲ್ಲಿ ಬಸ್ ನಿಲ್ದಾಣದ ಮುಂಭಾಗ ಎಸ್‍ಎಫ್‍ಐ, ಡಿವೈಎಫ್‍ಐ ಮುಖಂಡರು, ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು
ಬಾಗೇಪಲ್ಲಿ ಬಸ್ ನಿಲ್ದಾಣದ ಮುಂಭಾಗ ಎಸ್‍ಎಫ್‍ಐ, ಡಿವೈಎಫ್‍ಐ ಮುಖಂಡರು, ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು   

ಬಾಗೇಪಲ್ಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿ ಖಂಡಿಸಿ, ಎಸ್‌ಎಫ್‌ಐ, ಡಿವೈಎಫ್‍ಐ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಮುಖಂಡರು, ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದ ಜಿ.ವಿ.ಶ್ರೀರಾಮರೆಡ್ಡಿ ಪುತ್ಥಳಿ ಮುಂದೆ ಪ್ರತಿಭಟನೆ ಮಾಡಿದರು.

ಪಟ್ಟಣದ ಸುಂದರಯ್ಯ ಭವನದಿಂದ ಹೊರಟ ಪ್ರತಿಭಟನಾಕಾರರು, ಡಿವಿಜಿ ಮುಖ್ಯರಸ್ತೆಯಲ್ಲಿ ಸಂಚರಿಸಿ, ಭಯೋತ್ಪಾದಕರ ಕೃತ್ಯಗಳನ್ನು ತಡೆಯದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಡಿವೈಎಫ್‍ಐ ಜಿಲ್ಲಾ ಮುಖಂಡ ಸುರೇಶ್‍ ಮದಕರಿ ಮಾತನಾಡಿ, ಭಯೋತ್ಪಾದಕರ ಪೈಶಾಚಿಕ ಕ್ರೌರ್ಯವನ್ನು ಡಿವೈಎಫ್‍ಐ, ಎಸ್‍ಎಫ್‍ಐ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಅಮಾಯಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಜೀವಗಳ ಜೊತೆ ಚೆಲ್ಲಾಟ ಆಡಿದ ಅಪರಾಧಿಗಳಿಗೆ ಕೇಂದ್ರ ಸರ್ಕಾರ ಕೂಡಲೇ ಶಿಕ್ಷೆಯಾಗುವಂತೆ ಖಾತ್ರಿಪಡಿಸಬೇಕು. ಜಮ್ಮು ಮತ್ತು ಕಾಶ್ಮೀರ ಜನರ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಎ.ಸೋಮಶೇಖರ ಮಾತನಾಡಿ, ಭಯೋತ್ಪಾದಕರ ದಾಳಿಯಲ್ಲಿ ಬಲಿಯಾದ ಕುಟುಂಬಗಳಿಗೆ ಎಸ್‍ಎಫ್‍ಐ ಸಂತಾಪ ವ್ಯಕ್ತಪಡಿಸುತ್ತದೆ. ದೇಶದ ಐಕ್ಯತೆ, ಸೌಹಾರ್ದ, ಶಾಂತಿಗೆ ಕಂಟಕ ಆಗಿರುವ ಭಯೋತ್ಪಾದನೆ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕು. ಭಯೋತ್ಪಾದನೆ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.

ಪ್ರಾಂತ ರೈತ ಸಂಘ ಜಿಲ್ಲಾ ಸಹ ಸಂಚಾಲಕ ಡಿ.ಟಿ.ಮುನಿಸ್ವಾಮಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿಯಲ್ಲಿ ಇದೆ ಎಂದು ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಕಟಿಸಿದ್ದಾರೆ. ಆದರೆ ಒಂದು ತಿಂಗಳ ನಂತರ ಕಾಶ್ಮೀರದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ವಾಸ್ತವ ಪರಿಸ್ಥಿತಿಯಲ್ಲಿ ಅಲ್ಲಿನ ನಿವಾಸಿಗಳ, ವಲಸೆ ಕಾರ್ಮಿಕರ ಹಾಗೂ ಪ್ರವಾಸಿಗರ ಮೇಲೆ ನಿರಂತರ ದಾಳಿ ನಡೆಯುತ್ತಿವೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಸಹಜಸ್ಥಿತಿ ನೆಲೆಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಚನ್ನರಾಯಪ್ಪ, ರಾಜ್ಯ ಸಮಿತಿ ಸದಸ್ಯ ಎಂ.ಎನ್.ರಘುರಾಮರೆಡ್ಡಿ, ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಕಾರ್ಯದರ್ಶಿ ಆಗಟಮಡಕಕೃಷ್ಣಪ್ಪ, ಮುಖಂಡ ಬಿ.ಎಚ್.ರಫೀಕ್, ರಾಮಾಂಜಿ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.