ADVERTISEMENT

ಅವಾಚ್ಯ ಪದ ಬಳಕೆ: ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

ರೈತಸಂಘದ ಪದಾಧಿಕಾರಿಗಳ ಖಂಡನೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 13:03 IST
Last Updated 21 ಮೇ 2020, 13:03 IST
ನಗರದಲ್ಲಿ ರೈತಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದಲ್ಲಿ ರೈತಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ರೈತ ಸಂಘದ ಹೋರಾಟಗಾರ್ತಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿರುವ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಪಿ.ರಾಮನಾಥ್, ‘ಹೋರಾಟಗಾರ್ತಿ ವಿರುದ್ಧ ಅಸಭ್ಯ ಪದ ಬಳಕೆ ಮಾಡಿರುವ ಮಾಧುಸ್ವಾಮಿ ಕಾನೂನು ಮಂತ್ರಿಯಾಗಿ ಮುಂದುವರೆಯಲು ಯೋಗ್ಯರಲ್ಲ. ಇಂತಹ ಸಚಿವರಿಂದ ತಕ್ಷಣ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಹೋರಾಟಗಾರರ ಬಳಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲದವರು, ಜನಸಾಮಾನ್ಯರ ಸಮಸ್ಯೆ ಬಗೆಹರಿಸದವರು ಸಚಿವ ಸಂಪುಟದಲ್ಲಿದ್ದು ಏನು ಪ್ರಯೋಜನ? ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಹೇಳಿದರು.

ADVERTISEMENT

‘ಸಚಿವರು ನಮ್ಮ ಭಾಗಕ್ಕೆ ಬಂದಾಗ ಸಾಕಷ್ಟು ಕೆರೆಗಳಿಗೆ ಬೇಗ ನೀರು ಬರುತ್ತದೆ ಎಂದು ನಾವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಸಚಿವರ ಈ ವರ್ತನೆ ನೋಡಿದ ಮೇಲೆ ನಮ್ಮ ಆಸೆ ನಿರಾಸೆಯಾಗಿದೆ. ಕೆ.ಸಿ.ವ್ಯಾಲಿ, ಎಚ್‌.ಎನ್.ವ್ಯಾಲಿಗಾಗಿ ಸಾಕಷ್ಟು ವರ್ಷಗಳಿಂದ ಹೋರಾಟ ಮಾಡಿದವರಿಗೆ ಈ ರೀತಿ ಅವಮಾನ ಮಾಡಿರುವುದು ಅಕ್ಷಮ್ಯ‘ ಎಂದು ತಿಳಿಸಿದರು.

‘ನಮಗೆ ಈಗ ನಿರೀಕ್ಷೆಯ ಜಾಗದಲ್ಲಿ ಆತಂಕ ಮೂಡಿದೆ. ತಮ್ಮ ತಪ್ಪಿಗೆ ನೈತಿಕ ಹೊಣೆ ಹೊತ್ತು ಮಾಧುಸ್ವಾಮಿ ಅವರು ಸಣ್ಣ ನೀರಾವರಿ ಸಚಿವ ಸ್ಥಾನಕ್ಕಾದರೂ ರಾಜೀನಾಮೆ ನೀಡುವ ಮೂಲಕ ತಮ್ಮ ಘನತೆ ಕಾಪಾಡಿಕೊಳ್ಳಬೇಕು‘ ಎಂದರು.

ರೈತಸಂಘದ ಪದಾಧಿಕರಿಗಳಾದ ವೇಣುಗೋಪಾಲ್, ರಾಮಾಂಜಿನಪ್ಪ, ಲಕ್ಷ್ಮಣ್ ರೆಡ್ಡಿ, ಉಮಾ, ಪ್ರಮೀಳಮ್ಮ, ಸೀಕಲ್ ರಮಣಾರೆಡ್ಡಿ, ತಾದೂರು ಮಂಜುನಾಥ್, ದಪರ್ತಿ ಮುರುಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.