ADVERTISEMENT

ವೇತನ ಪಾವತಿಗೆ ಆಗ್ರಹಿಸಿ ಧರಣಿ

ಜಿಲ್ಲಾಡಳಿತ ಭವನದ ಎದುರು ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 12:03 IST
Last Updated 21 ಸೆಪ್ಟೆಂಬರ್ 2020, 12:03 IST
ಜಿಲ್ಲಾಡಳಿತ ಭವನದ ಎದುರು ಗ್ರಾಮ ಪಂಚಾಯಿತಿ ನೌಕರರು ಧರಣಿ ನಡೆಸಿದರು.
ಜಿಲ್ಲಾಡಳಿತ ಭವನದ ಎದುರು ಗ್ರಾಮ ಪಂಚಾಯಿತಿ ನೌಕರರು ಧರಣಿ ನಡೆಸಿದರು.   

ಚಿಕ್ಕಬಳ್ಳಾಪುರ: ಬಾಕಿ ವೇತನ ಪಾವತಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು, ಸಿಐಟಿಯು ಸಹಯೋಗದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಧರಣಿಯಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಪಾಪಣ್ಣ, ‘ಸರ್ಕಾರಿ ಆದೇಶದ ಅನ್ವಯ 14ನೇ ಹಣಕಾಸು ಆಯೋಗದ ಹಣದಲ್ಲಿ ಪಂಚಾಯಿತಿ ನೌಕರರಿಗೆ ವೇತನ ನೀಡಬೇಕು. ಆದರೆ, ರಾಜ್ಯದಲ್ಲಿ ಕಳೆದ 15 ರಿಂದ 20 ತಿಂಗಳಿಂದ ನೌಕರರಿಗೆ ವೇತನ ಪಾವತಿಯಾಗಿಲ್ಲ. ಹೀಗಾಗಿ ನೌಕರರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ’ ಎಂದು ಹೇಳಿದರು.

‘ರಾಜ್ಯದ 6,024 ಗ್ರಾಮ ಪಂಚಾಯಿತಿಗಳಲ್ಲಿ 65 ಸಾವಿರಕ್ಕೂ ಹೆಚ್ಚು ನೌಕರರು ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಆದರೆ, ಅವರ ವೇತನಕ್ಕೆ ಬೇಕಾಗುವ ₹900 ಕೋಟಿ ಅನುದಾನದಲ್ಲಿ, ರಾಜ್ಯ ಸರ್ಕಾರ ₹520 ಕೋಟಿ ಬಿಡುಗಡೆ ಮಾಡಿದೆ. ಉಳಿದ ಹಣ ಮಂಜೂರಾಗದ ಕಾರಣ ಸಿಬ್ಬಂದಿ ವರ್ಷಕ್ಕೆ ಕೇವಲ 8 ತಿಂಗಳು ಮಾತ್ರ ವೇತನ ಪಡೆಯುವಂತಾಗಿದೆ’ ಎಂದು ತಿಳಿಸಿದರು.

ADVERTISEMENT

‘ಗ್ರಾಮ ಪಂಚಾಯಿತಿ ನೌಕರರ ವೇತನ ಬಾಕಿ ಇದೆ. ಆದ್ದರಿಂದ ವೇತನಕ್ಕೆ ಕೊರತೆ ಇರುವ ₹382 ಕೋಟಿ ಅನುದಾನವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಪಂಚಾಯಿತಿ ನೌಕರರ ಸಂಬಳಕ್ಕೆ ಅನುದಾನ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಎಲ್ಲ ಪಂಚಾಯಿತಿ ನೌಕರರನ್ನು ಕಾಯಂಗೊಳಿಸಿ, ಸರ್ಕಾರಿ ನೌಕರರಿಗೆ ಇರುವ ಸೌಲಭ್ಯಗಳನ್ನು ನೀಡಬೇಕು. ಇಎಫ್‌ಎಂಎಸ್‌ಗೆ ಒಳಪಡಿಸಬೇಕು. ನಿವೃತ್ತಿ ಹೊಂದಿರುವ ಹಾಗೂ ಮರಣ ಹೊಂದಿರುವ ನೌಕರರ ಬಾಕಿ ಇರುವ ಉಪಧನ ನೀಡಬೇಕು’ ಎಂದು ಹೇಳಿದರು.

‘ಪಂಪ್ ಆಪರೇಟರ್‌ಗಳಿಗೆ ಅರ್ಧ ವೇತನ ನೀಡುವ ನಿರ್ಧಾರ ಹಿಂಪಡೆಯಬೇಕು. ಕ್ಲರ್ಕ್ ಕಂ ಡಾಟಾ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು. ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಆದಾಯ ಮಿತಿ ₹1.2 ಲಕ್ಷದಿಂದ ₹2 ಲಕ್ಷಕ್ಕೆ ಏರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ಆರ್.ಎನ್.ರಾಜು ಮಾತನಾಡಿ, ‘ಸರ್ಕಾರಿ ನೌಕರರಿಗೆ ನೀಡುವಂತೆ ಸರ್ಕಾರ ಪಂಚಾಯಿತಿ ನೌಕರರಿಗೂ ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ವೆಚ್ಚದಂತಹ ಸೌಲಭ್ಯಗಳನ್ನು ನೀಡಬೇಕು. ಎಲ್ಲ ನೌಕರರಿಗೂ ಸೇವಾ ಪುಸ್ತಕ ತೆರೆಯಬೇಕು. ನಿಯಮಾವಳಿಗಳ ಪ್ರಕಾರ ನೌಕರರಿಗೆ ಕಡ್ಡಾಯ ಮುಂಬಡ್ತಿ ನೀಡಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 1,700 ಗ್ರಾಮ ಪಂಚಾಯಿತಿ ನೌಕರರಿದ್ದಾರೆ. ಬಹುತೇಕ ನೌಕರರಿಗೆ ಸುಮಾರು 15 ತಿಂಗಳಿಂದ ವೇತನ ಬಾಕಿ ಪಾವತಿಯಾಗಿಲ್ಲ. ಇದರಿಂದ ನೌಕರರು ಬೀದಿಗೆ ಬೀಳುವ ಸ್ಥಿತಿಗೆ ತಲುಪಿದ್ದಾರೆ. ಇನ್ನಾದರೂ ಸರ್ಕಾರ ವೇತನ ಬಾಕಿ ಪಾವತಿಯನ್ನು ಆದ್ಯತೆಯಲ್ಲಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಈಗಾಗಲೇ ಗುರ್ತಿಸಿರುವ 61 ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಬೇಕು. ಪಂಚಾಯಿತಿ ನೌಕರರಿಂದ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಹೊಸ ಬಿಲ್ ಕಲೆಕ್ಟರ್‌ಗಳನ್ನು ನೇಮಕ ಮಾಡಬೇಕು. ಖಾಲಿ ಇರುವ ಹುದ್ದೆಗಳಿಗೆ ಜೇಷ್ಠತೆ ಆಧಾರದ ಮೇಲೆ ನೌಕರರಿಗೆ ನೀಡಬೇಕು’ ಎಂದು ಹೇಳಿದರು.

ಪ್ರತಿಭಟನಾಕಾರರು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಗಿರಿಜಾ ಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಶಂಕ್ರಪ್ಪ, ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಅಶ್ವತ್ಥಪ್ಪ, ಫಯಾಜ್ ಉಲ್ಲಾ, ವೆಂಕಟರಾಮ್, ಸತ್ಯನಾರಾಯಣ, ಈಶ್ವರಪ್ಪ, ವಿಜಯಕುಮಾರ್ ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.