ಚಿಂತಾಮಣಿ: ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡವರು, ನಿರ್ಗತಿಕರು, ಶೋಷಿತರಿಗೆ ಉಚಿತ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಸರ್ಕಾರಿ ಆಸ್ಪತ್ರೆಗಳ ಉದ್ದೇಶವಾಗಿದೆ. ಉದ್ದೇಶ ಎಷ್ಟರಮಟ್ಟಿಗೆ ಈಡೇರಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಗುರುವಾರ ರಾತ್ರಿ ವ್ಯಕ್ತಿಯೊಬ್ಬ ಅಪಘಾತದಲ್ಲಿ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು. ಸೂಕ್ತ ಚಿಕಿತ್ಸೆ ನೀಡಲಿಲ್ಲ, ಆಂಬುಲೆನ್ಸ್ ವ್ಯವಸ್ಥೆ ಮಾಡಲಿಲ್ಲ, ವೈದ್ಯಕೀಯ ನಿರ್ಲಕ್ಷ್ಯದಿಂದ ಗಾಯಾಳು ಸಾವನ್ನಪ್ಪಿದ್ದಾನೆ ಎಂದು ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು.
ತಾಲ್ಲೂಕಿನ ಬಟ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಕಳೆದ ತಿಂಗಳು ಇದೇ ರೀತಿಯ ಪ್ರತಿಭಟನೆ ನಡೆದಿತ್ತು. ವೈದ್ಯರ ನಿರ್ಲಕ್ಷ್ಯತೆ, ರಾತ್ರಿ ಪಾಳಿಯಲ್ಲಿ ವೈದ್ಯರು ಸಿಗುವುದಿಲ್ಲ. ಆಂಬುಲೆನ್ಸ್ ಸೂಕ್ತ ಸಮಯಕ್ಕೆ ದೊರೆಯಲಿಲ್ಲ ಎಂದು ಆರೋಪಿಸಿ ಮೃತನ ಸಂಬಂಧಿಕರು ಆಸ್ಪತ್ರೆಯ ಮುಂದೆ ಪ್ರತಿಭಟಿಸಿದ್ದರು.
ನಗರದ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪದೇ ಪದೇ ಇಂತಹ ದೂರುಗಳು ಎದುರಾಗುತ್ತಿವೆ. ಸಾರ್ವಜನಿಕ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಿಗೆ ಒಳ್ಳೆಯ ಅಭಿಪ್ರಾಯವಿಲ್ಲ, ಮೂಗು ಮುರಿಯುವವರೇ ಜಾಸ್ತಿ. ಬಹುತೇಕ ಜನರು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ವೈದ್ಯರು ರೋಗಿಗಳ ನಂಬಿಕೆ ಗಳಿಸಬೇಕು, ಬದ್ಧತೆಯಿಂದ ಚಿಕಿತ್ಸೆ ನೀಡಿದರೆ ಪರಿಣಾಮಕಾರಿಯಾಗಿರುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ತಾಲ್ಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆ 1, ತಾಯಿ ಮತ್ತು ಮಕ್ಕಳ ಆಸ್ಪತ್ರೆ 1, ಸಮುದಾಯ ಆರೋಗ್ಯ ಕೇಂದ್ರ 1, ಪ್ರಾಥಮಿಕ ಆರೋಗ್ಯ ಕೇಂದ್ರ 10, ನಗರ ಆರೋಗ್ಯ ಕೇಂದ್ರ 1, ನಮ್ಮ ಕ್ಲಿನಿಕ್ 2, ಹೊರವಲಯ ಚಿಕಿತ್ಸಾ ಕೇಂದ್ರ 2 ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಎಲ್ಲೂ ವೈದ್ಯರ ಕೊರತೆಯಿಲ್ಲ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 12 ವೈದ್ಯರ ಹುದ್ದೆಗಳಿದ್ದು ಎಲ್ಲ ಭರ್ತಿಯಾಗಿವೆ. ಅನಸ್ತೇಷಿಯಾ ಮತ್ತು ಮೆಡಿಕಲ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಶುಷ್ರೂಕಿಯರ 28 ಹುದ್ದೆಗಳಿದ್ದು 18 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ನಗರದ ಹೃದಯಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆ, ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ಸೌಲಭ್ಯ ಒದಗಿಸಲಾಗಿದೆ. ಪ್ರತಿನಿತ್ಯ ಸುಮಾರು 700-800 ಹೊರರೋಗಿಗಳು, 100 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.
ಆಸ್ಪತ್ರೆಗಳು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕಲ್ಪಿಸುವ ತಾಣಗಳಾಗಬೇಕು. ಆದರೆ ಬಹುತೇಕ ವ್ಯತಿರಿಕ್ತವಾದ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸ್ವಚ್ಛತೆ ಇಲ್ಲದಿರುವುದು ರೋಗಿಗಳು ಹಾಗೂ ಅವರ ಆರೈಕೆ ಮಾಡುವ ಸಂಬಂಧಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸರ್ಕಾರಿ ಆಸ್ಪತ್ರೆಗಳೇ ಅನಾರೋಗ್ಯಕ್ಕೆ ಈಡಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಒಂದು ತಿಂಗಳಿನಿಂದ ಮೋಡ ಕವಿದ ವಾತಾವರಣದ ಪರಿಣಾಮ ಜನರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗಳ ಬಾಗಿಲು ತಟ್ಟುವುದು ಹೆಚ್ಚಾಗಿದೆ. ಆಸ್ಪತ್ರೆಗಳ ಹೊರ ರೋಗಿಗಳ ಮತ್ತು ಒಳರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಯ ಸ್ವಚ್ಛತೆಯನ್ನು ಟೆಂಡರ್ ಮೂಲಕ ಹೊರಗುತ್ತಿಗೆದಾರರಿಗೆ ನೀಡಲಾದೆ. ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಗುತ್ತಿಗೆದಾರರ ಬಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ಸಾಧ್ಯವಾದಷ್ಟು ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್.
ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ಇದೆ. ಬೆಂಗಳೂರು-ಕಡಪ ರಾಜ್ಯ ಹೆದ್ದಾರಿ ತಾಲ್ಲೂಕಿನ ಮೂಲಕ ಹಾದು ಹೋಗಿದ್ದು ಸದಾ ಹೆಚ್ಚು ಅಪಘಾತ ನಡೆಯುತ್ತಿರುತ್ತವೆ. ಗಾಯಾಳುಗಳನ್ನು ಕರೆತಂದರೆ ಪ್ರಥಮ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗಳಿಗೆ ಸಾಗ ಹಾಕುತ್ತಾರೆ. ಎಲ್ಲ ಪ್ರಕರಣಗಳನ್ನು ಕೋಲಾರ, ಬೆಂಗಳೂರಿಗೆ ಕಳುಹಿಸುವುದರಿಂದ ಬಡವರಿಗೆ ತೊಂದರೆ ಆಗುತ್ತಿದೆ ಎಂಬುದು ಸಾರ್ಜನಿಕರ ಆರೋಪ.
ಆಂಬುಲೆನ್ಸ್ ದೊರೆಯುವುದಿಲ್ಲ: ರೋಗಿಗಳು ಮತ್ತು ಸಂಬಂಧಿಕರಿಂದ ಕೇಳಿಬರುವ ಮತ್ತೊಂದು ಆರೋಪ ಎಂದರೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ದೊರೆಯುವುದಿಲ್ಲ. ಆಂಬುಲೆನ್ಸ್ ತಡವಾಗುವುದೆರಿಂದ ಅಪಘಾತದ ಅನೇಕ ಪ್ರಕರಣಗಳಲ್ಲಿ ಇತರೆ ಆಸ್ಪತ್ರೆಗಳಿಗೆ ಕರೆದೊಯ್ಯುವಾಗಲೇ ಗಾಯಾಳುಗಳು ಮೃತಪಟ್ಟಿರುತ್ತಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ 108 ಮೂರು ವಾಹನಗಳಿದ್ದು ಒಂದು ಕೆಟ್ಟು ನಿಂತಿದೆ. ತಾಲ್ಲೂಕಿನ ಎಲ್ಲಾ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ ಇಲ್ಲ. ಕೈವಾರ, ಮುರುಗಮಲ್ಲ, ಬಟ್ಲಹಳ್ಳಿ, ಬುರುಡಗುಂಟೆ, ಇರಗಂಪಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಆಂಬುಲೆನ್ಸ್ ಇವೆ. ಬೇರೆ ಕಡೆ ಹೋಗಿರುವಾಗ ಕಾರ್ಯನಿರ್ವಹಿಸುವಾಗ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಅನುಕೂಲ ಮಾಡಿಕೊಡುತ್ತೇವೆ ಎಂದು ವೈದ್ಯಾಧಿಕಾರಿ ಹೇಳುತ್ತಾರೆ.
ಆಂಬುಲೆನ್ಸ್ ಕೊರತೆ ಆಂಬುಲೆನ್ಸ್ ಕೊರತೆ ಗಮನಕ್ಕೆ ಬಂದಿದೆ. ಮೂರು 108 ವಾಹನಗಳಿದ್ದು ಮತ್ತೊಂದು ಅವಶ್ಯಕವಾಗಿದೆ. ಹಿರಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ದೊರೆಯುವ ನಿರೀಕ್ಷೆ ಇದೆ. ಸರ್ಕಾರದ ನೀತಿಯಂತೆ ಕಿ.ಮೀ ಮಿತಿ ಇರುತ್ತದೆ. ರೋಗಿಗಳಿಗೆ ಅದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಬೇರೆ ಕಡೆ ಹೋಗಿರುತ್ತದೆ. ದೂರು ಬಂದಾಗ ತನಿಖೆ ನಡೆಸಿ ತಪ್ಪಾಗಿದ್ದರೆ ಕ್ರಮಕೈಗೊಳ್ಳುತ್ತೇವೆ ಡಾ.ರಾಮಚಂದ್ರಾರೆಡ್ಡಿ ತಾಲ್ಲೂಕು ಆರೋಗ್ಯಾಧಿಕಾರಿದೂರು ಬಂದಾಗ ತನಿಖೆ ನಡೆಸಿ ತಪ್ಪಾಗಿದ್ದರೆ ಕ್ರಮಕೈಗೊಳ್ಳುತ್ತೇವೆ
ಡವರಿಗೆ ತೊಂದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯತೆ ಹೆಚ್ಚಾಗಿದೆ. ವೈದ್ಯರು ಮತ್ತು ಸಿಬ್ಬಂದಿ ರೋಗಿಗಳನ್ನು ಬೇಜವಾಬ್ದಾರಿಯಾಗಿ ನಡೆಸಿಕೊಳ್ಳುತ್ತಾರೆ. ಸಣ್ಣಪುಟ್ಟ ಪ್ರಕರಣಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸುವುದರಿಂದ ಬಡವರಿಗೆ ತೊಂದರೆ ಆಗುತ್ತಿದೆ ಮಂಜುನಾಥ್ ವಕೀಲ ಚಿಂತಾಮಣಿ ಮನಸ್ಥಿತಿ ಬದಲಾಗಬೇಕು ಆಸ್ಪತ್ರೆಗಳ ವೈದ್ಯರು ಶುಷ್ರೂಷಕರು ಹಾಗೂ ಸಿಬ್ಬಂದಿಯ ಮನಸ್ಥಿತಿ ಬದಲಾಗಬೇಕಿದೆ. ಅವರು ಮಾನಸಿಕವಾಗಿ ಬದಲಾಗದೆ ಯಾವುದೇ ಕ್ರಮಕೈಗೊಂಡರೂ ಪ್ರಯೋಜನವಿಲ್ಲ. ಎಲ್ಲ ಕಡೆ ವೈದ್ಯರಿದ್ದಾರೆ. ವೈದ್ಯರ ಕೊರತೆ ನಿವಾರಣೆ ಆಗಿದ್ದರೂ ರೋಗಿಗಳನ್ನು ಕಾಣುವ ಹಾಗೂ ಚಿಕಿತ್ಸೆ ನೀಡುವ ಮನಸ್ಥಿತಿ ಬದಲಾಗಬೇಕು.ರಾಮಮೋಹನ್ ನಾಗರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.