ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕ ಗ್ರಾಮ ಪಂಚಾಯಿತಿಯು ನರೇಗಾ ಯೋಜನೆಯಡಿ ಉದ್ಯಾನವನ್ನು ನಿರ್ಮಾಣ ಮಾಡಿದೆ. ಆದರೆ, ಈ ಉದ್ಯಾನವನ್ನು ನಿರ್ವಹಣೆ ಮಾಡದ ಕಾರಣ, ಉದ್ಯಾನದ ಒಳಗೆ ಕಳೆಗಿಡಗಳು ದಟ್ಟವಾಗಿ ಬೆಳೆದಿದ್ದು, ಜನರು ವಾಯುವಿಹಾರ ಮಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಸ್ಥಳೀಯರು, ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ಇದೇ ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಗ್ರಾಮದ ಜನರು ಪ್ರತಿನಿತ್ಯ ವಾಯುವಿಹಾರ ಮಾಡುತ್ತಿದ್ದರು. ಉದ್ಯಾನದಲ್ಲಿ ವಿವಿಧ ತಳಿಯ ಅಲಂಕಾರಿಕ ಗಿಡಗಳನ್ನು ನಾಟಿ ಮಾಡಲಾಗಿತ್ತು. ಜೊತೆಗೆ ಕೆಲವು ಔಷಧಿ ಸಸ್ಯಗಳನ್ನು ಸಹ ನೆಡಲಾಗಿತ್ತು. ವಾಯುವಿಹಾರಕ್ಕಾಗಿ ಪ್ರತ್ಯೇಕವಾಗಿ ಟ್ರ್ಯಾಕ್ ನಿರ್ಮಿಸಲಾಗಿತ್ತು. ಆದರೆ, ಟ್ರ್ಯಾಕ್‌ನಲ್ಲಿ ಮತ್ತು ಉದ್ಯಾನದ ಸುತ್ತಲೂ ಬೇಕಾಬಿಟ್ಟಿಯಾಗಿ ವಿವಿಧ ಗಿಡಗಳು ಮತ್ತು ಕಳೆಗಿಡಗಳು ದಟ್ಟವಾಗಿ ಬೆಳೆದು ನಿಂತಿವೆ ಎಂದು ಸ್ಥಳೀಯರು ದೂರಿದರು.
ಇಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಅಂಬಿಕಾ ಅವರು, ಈ ಉದ್ಯಾನವನ್ನು ಚೆನ್ನಾಗಿ ನೋಡಿಕೊಂಡಿದ್ದರು. ಅವರು ವರ್ಗಾವಣೆಯಾದ ಬಲಿಕ ಗ್ರಾಮ ಪಂಚಾಯಿತಿಯವರು ಉದ್ಯಾನದ ಕಡೆಗೆ ಗಮನ ಹರಿಸುತ್ತಿಲ್ಲ. ಈ ಕಾರಣದಿಂದ ವಾಯುವಿಹಾರ ನಡೆಸುವ ಟ್ರ್ಯಾಕ್‌ನಲ್ಲಿ ಹುಲ್ಲು ಮತ್ತು ಕಳೆಗಿಡ ಬೆಳೆದಿದೆ. ಉದ್ಯಾನ ಪ್ರವೇಶಿಸುವ ದ್ವಾರದಲ್ಲಿ ಕಳೆಗಿಡಗಳಿವೆ. ಇದರಿಂದ ಒಳಗೆ ಬರುವುದಕ್ಕೂ ಭಯವಾಗುತ್ತದೆ ಎಂದು ವಾಯುವಿಹಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು.
ಹಾವುಗಳ ದರ್ಶನ: ಗಿಡಗಂಟಿಗಳು ದಟ್ಟವಾಗಿ ಬೆಳೆದ ಕಾರಣ ಇಲ್ಲಿ ಆಗಾಗ ಹಾವುಗಳು ಸುಳಿದಾಡುತ್ತಿರುತ್ತವೆ. ಇದರಿಂದಾಗಿ ಗ್ರಾಮಸ್ಥರು ಮತ್ತು ಆಸ್ಪತ್ರೆಗೆ ಬರುವ ರೋಗಿಗಳು ಉದ್ಯಾನದ ಒಳಗೆ ಕಾಲಿಡಲು ಭಯಪಡುತ್ತಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳು ಉದ್ಯಾನವನದಲ್ಲಿ ಕುಳಿತುಕೊಳ್ಳಲು ಭಯಪಡುವಂತಾಗಿದೆ. ಆದ್ದರಿಂದ ಕೂಡಲೇ ಉದ್ಯಾನವನದಲ್ಲಿ ದಟ್ಟವಾಗಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ, ವಾಯುವಿಹಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆ ಹೆಚ್ಚಾಗಿ ಸುರಿದ ಕಾರಣ ಹುಲ್ಲು ಮತ್ತು ಗಿಡಗಂಟಿಗಳು ಹೆಚ್ಚಾಗಿ ಬೆಳೆದಿದೆ. ಕಳೆನಾಶಕ ಔಷಧ ಸಿಂಪಡಿಸಿ ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವಂತೆ ಉದ್ಯಾನವನ್ನು ನಿರ್ವಹಿಸಲಾಗುವುದುಸವಿತಾ ಪಿಡಿಒ ಜಂಗಮಕೋಟೆ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.