ADVERTISEMENT

ಜ.1 ರಿಂದ ಖರೀದಿ ಕೇಂದ್ರ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 19:45 IST
Last Updated 21 ಡಿಸೆಂಬರ್ 2019, 19:45 IST

ಚಿಕ್ಕಬಳ್ಳಾಪುರ: ‘ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ, ರಾಗಿ ಮತ್ತು ಬಿಳಿಜೋಳ ಸೇರಿದಂತೆ ವಿವಿಧ ಧಾನ್ಯಗಳ ಖರೀದಿ ಪ್ರಕ್ರಿಯೆಯನ್ನು ಜನವರಿ 1 ರಿಂದ ಆರಂಭಿಸಲಾಗುತ್ತದೆ. ಖರೀದಿ ಕೇಂದ್ರವು ಮಾರ್ಚ್ ಅಂತ್ಯದವರೆಗೆ ಕಾರ್ಯನಿರ್ವಹಿಸಲಿದೆ’ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಕೃಷಿ ಇಲಾಖೆ ಆಯೋಜಿಸಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರಾಗಿ, ಮುಸುಕಿನ ಜೋಳ ಖರೀದಿ ಕೇಂದ್ರಗಳನ್ನು ತೆರೆಯುವ ಸಂಬಂಧ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರು ಡಿ. 26 ರಿಂದ ಜ. 10ರ ವರೆಗೆ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಖರೀದಿ ಕೇಂದ್ರದಲ್ಲಿ ಭತ್ತ ಪ್ರತಿ ಕ್ವಿಂಟಾಲ್‌ಗೆ ₹1,815, ಬಿಳಿಜೋಳ (ಹೈ-ಬ್ರಿಡ್) ₹2,550, ಬಿಳಿ ಜೋಳ- (ಮಾಲ್ದಂಡಿ) ₹2,570, ರಾಗಿಯನ್ನು ₹3,150 ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ರೈತರು ಆಧಾರ್‍ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಪಹಣಿ ಪ್ರತಿಗಳನ್ನು ನೀಡಿ ಹೆಸರು ನೋಂದಣಿ ಮಾಡಿಸಬೇಕು. ಪ್ರತಿ ರೈತರಿಂದ ಪ್ರತಿ ಎಕರೆಗೆ 15 ಕ್ವಿಂಟಾಲ್‌ನಂತೆ ಗರಿಷ್ಠ 75 ಕ್ವಿಂಟಾಲ್ ರಾಗಿ ಮತ್ತು ಮುಸುಕಿನ ಜೋಳ ಖರೀದಿಸಲಾಗುತ್ತದೆ’ ಎಂದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕ ಸೋಮಶಂಕರಪ್ಪ, ಕೃಷಿ ಇಲಾಖೆಯ ಜಂಟಿ ಉಪನಿರ್ದೇಶಕಿ ಅನುರೂಪಾ, ಜಿ.ಎಫ್.ಸಿ.ಎಸ್.ಸಿ. ಜಿಲ್ಲಾ ವ್ಯವಸ್ಥಾಪಕ ಸದಾಶಿವ.ಜಿ.ಭಂಡಾರೆ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.