ADVERTISEMENT

ಚಿಕ್ಕಬಳ್ಳಾಪುರ | ಗಣಿಗುಂಡಿ: ರಕ್ಷಣಾ ಬೇಲಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 2:52 IST
Last Updated 30 ಆಗಸ್ಟ್ 2025, 2:52 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಕಟ್ಟಡ ನಿರ್ಮಾಣ ಚಟುವಟಿಕೆ ಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಜಲ್ಲಿಕಲ್ಲು, ಕಟ್ಟಡ ನಿರ್ಮಾಣದ ಕಲ್ಲುಗಳು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಕಚ್ಚಾ ಸಾಮಗ್ರಿಗಳು ಪೂರೈಕೆ ಆಗುತ್ತಿವೆ. 

ADVERTISEMENT

ಚಿಕ್ಕಬಳ್ಳಾಪುರವು ಕಲ್ಲು ಗಣಿಗಾರಿಕೆಯ ಪ್ರಮುಖ ಪ್ರದೇಶವೂ ಆಗಿದೆ. ಇಂತಹ ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕ್ವಾರಿಗಳ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ನಿರ್ಮಾಣ ಆಗುತ್ತವೆ. ಹೀಗೆ ನಿರ್ಮಾಣವಾಗುವ ಕ್ವಾರಿಯ ಗುಂಡಿಗಳು ಮೃತ್ಯುಕೂಪಗಳು ಆಗುತ್ತಿವೆ. ಕೆಲವು ಕಡೆಗಳಲ್ಲಿ ಕಲ್ಲುಗಳೆಲ್ಲವೂ ಮುಗಿದ ನಂತರ ಕ್ವಾರಿಯ ಗುಂಡಿಗಳು ಹಾಳು ಬೀಳುತ್ತಿವೆ. 

ಇಂತಹ ಕ್ವಾರಿ ಗುಂಡಿಗಳ ಸುತ್ತ ರಕ್ಷಣಾ ಬೇಲಿಗಳನ್ನು ನಿರ್ಮಿಸುವಂತೆ ರೈತ ಸಂಘದ ಮುಖಂಡರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಹೀಗೆ ಮನವಿ ಸಲ್ಲಿಸಿ ಎರಡು ತಿಂಗಳಾದರೂ ಕ್ರಮಕೈಗೊಳ್ಳುವಲ್ಲಿ ಇಲಾಖೆ ಮಾತ್ರ ನಿರ್ಲಕ್ಷ್ಯವಹಿಸಿದೆ ಎಂದು ರೈತ ಮುಖಂಡರು ದೂರುವರು. 

ಕಳೆದ ಏಪ್ರಿಲ್‌ನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಣಿವೆ ನಾರಾಯಣಪುರ ಬಳಿಯ ಕಲ್ಲು ಕ್ವಾರಿ ಹೊಂಡದಲ್ಲಿ ಮುಳುಗಿ ಬಿಹಾರ ಮೂಲಕ ಕಾರ್ಮಿಕ ಮಹಮದ್ ಮೃತಪಟ್ಟಿದ್ದರು. ಮಹಮದ್ ಮುದ್ದೇನಹಳ್ಳಿಯಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು ಕಾರ್ಮಿಕರ ಜೊತೆ ಕ್ವಾರಿಯ ಹೊಂಡದಲ್ಲಿ ಈಜಲು ತೆರಳಿದ್ದರು. ಈ ವೇಳೆ ಅವರು ಆಳದ ಜಾಗದಲ್ಲಿ ಮುಳುಗಿದ್ದರು. 

ಇಂತಹ ಘಟನೆಗಳು ಮರುಕಳಿಸಬಾರದು ಎನ್ನುವ ದೃಷ್ಟಿಯಿಂದ ರೈತ ಮುಖಂಡರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮನವಿ ಸಲ್ಲಿಸಿದ್ದರು. 

‘ಕ್ವಾರಿಗಳಲ್ಲಿ ಬಂಡೆಗಳನ್ನು ತೆಗೆದ ಕಾರಣ ಆಳವಾದ ಗುಂಡಿಗಳು ಬೀಳುತ್ತಿವೆ. ಗೌರಿಬಿದನೂರು ತಾಲ್ಲೂಕಿನ ಅರಸಲಬಂಡೆ ಬಳಿ 200 ಅಡಿ ಆಳದ ಕ್ವಾರಿ ಇದೆ. ಇದು ಇಲ್ಲಿನ ‌ಜನರಿಗೆ ಅಪಾಯಕಾರಿ ಪ್ರದೇಶ. ಈ ಕ್ವಾರಿ ಸುತ್ತಮುತ್ತಲೂ ಸುರಕ್ಷತಾ ವಲಯವಾಗಿ ಪರಿವರ್ತಿಸಬೇಕು’ ಎಂದು ರೈತ ಸಂಘವು ಮನವಿ ಮಾಡಿತ್ತು. 

ಜಿಲ್ಲೆಯಲ್ಲಿ ಸದ್ಯ 136 ‌ಕಟ್ಟಡ ಕಲ್ಲು ಗಣಿಗಾರಿಕೆ ಗುತ್ತಿಗೆಗಳು ಇವೆ. ಈಗ ಮತ್ತೆ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಲು ನಿರಾಕ್ಷೇಪಣೆ ಕೋರಿ ಕಂದಾಯ ಮತ್ತು ಅರಣ್ಯ ಇಲಾಖೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಇವೆ. 

ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇಂತಹ ಕಡೆ ಸುರಕ್ಷಾ ಕ್ರಮಗಳ ಪಾಲನೆಗೂ ಇಲಾಖೆ ಮುಂದಾಗಬೇಕು ಎಂದು ರೈತ ಮುಖಂಡರು ಆಗ್ರಹಿಸುವರು.

‘ಸುರಕ್ಷತೆಗೆ ಕ್ರಮವಹಿಸಿ’

ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಗಣಿಗಾರಿಕೆಗಾಗಿ ಗುಂಡಿಗಳನ್ನು ತೆಗೆಯಲಾಗಿದೆ. ಈ ಆಳದ ಗುಂಡಿಗಳನ್ನು ನಂತರ ಮುಚ್ಚದೆ ಯಥಾಸ್ಥಿತಿಯಲ್ಲಿ ಬಿಡಲಾಗುತ್ತದೆ. ಈ ಗುಂಡಿಗೆ ಯಾರಾದರೂ ಬಿದ್ದರೆ ಗತಿ ಏನು ಎಂದು ಗೌರಿಬಿದನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಪ್ರಶ್ನಿಸುವರು. 

ಆಳದ ಗುಂಡಿಗಳು ಬಿದ್ದಿರುವ ಕಡೆ ಸುತ್ತಲೂ ರಕ್ಷಣಾ ಬೇಲಿ ಅಳವಡಿಸಬೇಕು. ಕೆಲವು ಕಡೆ ಅರಣ್ಯ ಅಂಚಿನಲ್ಲಿ ಗಣಿಗಾರಿಕೆಗಳ ನಡೆಯುತ್ತಿವೆ. ಜಾನುವಾರುಗಳನ್ನು ಮೇಯಲು ಬಿಟ್ಟಾಗ ಅವು ಈ ಗುಂಡಿಗಳಿಗೆ ಬಿದ್ದರೆ ಹೊಣೆ ಯಾರು? ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಬಗ್ಗೆ ತಕ್ಷಣವೇ ಕ್ರಮವಹಿಸಬೇಕು. ಗಣಿ ಮಾಲೀಕರಿಗೆ ಸೂಚನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.