
ಶಿಡ್ಲಘಟ್ಟ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಬಿಳಿಜೋಳ ಮಾರಾಟ ಮಾಡಲು ಈಗಾಗಲೇ ತಾಲ್ಲೂಕಿನಿಂದ ನೋಂದಣಿ ಮಾಡಿಕೊಂಡಿರುವ ರೈತರಿಂದ ರಾಗಿ ಖರೀದಿ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಎನ್.ಗಗನಸಿಂಧು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಪ್ರತಿ ಕ್ವಿಂಟಲ್ ರಾಗಿಗೆ ₹4,866 ದರ ನಿಗದಿಪಡಿಸಲಾಗಿದೆ. ತಾಲ್ಲೂಕಿನ 2055 ನೋಂದಾಯಿತ ರೈತರು ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬಹುದು ಎಂದರು.
ಸರ್ಕಾರ ಜಾರಿಗೊಳಿಸಿರುವ ಬೆಂಬಲ ಬೆಲೆ ಯೋಜನೆಯಡಿ ವಿವಿಧ ಬೆಳೆಗೆ ಸರ್ಕಾರ ನಿಗದಿಪಡಿಸಿರುವ ಬೆಲೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿದೆ. ಹಾಗಾಗಿ ತಾಲ್ಲೂಕಿನಿಂದ ಈಗಾಗಲೇ ನೋಂದಾಯಿಸಿಕೊಂಡಿರುವ ರೈತರು ತ್ವರಿತವಾಗಿ ರಾಗಿ ಮಾರಾಟ ಮಾಡಿ ಎಂದರು.
ರೈತರಿಗೆ ಅನುಕೂಲವಾಗುವಂತೆ ತಾಲ್ಲೂಕಿನ ನೋಂದಾಯಿತವಾಗಿರುವ ಅಧಿಕೃತ 2ವೇ ಬ್ರಿಡ್ಜ್‌ಗಳಾದ ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯಿರುವ ಸುಮುಖ ವೇ ಬ್ರಿಡ್ಜ್ ಹಾಗೂ ನಗರದ ಬೈಪಾಸ್ ರಸ್ತೆಯ ಮಾರುತಿ ವೇ ಬ್ರಿಡ್ಜ್ ಗುರುತಿಸಲಾಗಿದ್ದು, ರೈತರು ಇಲ್ಲಿ ತೂಕ ಮಾಡಿಸಿಕೊಂಡು ಖಾತ್ರಿ ಪಡೆಯಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.