ADVERTISEMENT

ಜಿಲ್ಲೆಗೆ ಮಳೆಯ ಭಾರಿ ಕೊರತೆ

ಜು.8ರ ಅಂತ್ಯಕ್ಕೆ ಕೇವಲ 4.4 ಮಿ.ಮೀ ಮಳೆ; ಶೇ 2.69ರಷ್ಟು ಮಾತ್ರ ಬಿತ್ತನೆ

ಡಿ.ಎಂ.ಕುರ್ಕೆ ಪ್ರಶಾಂತ
Published 9 ಜುಲೈ 2025, 2:37 IST
Last Updated 9 ಜುಲೈ 2025, 2:37 IST
<div class="paragraphs"><p> ತೇವಾಂಶ ಕೊರತೆ, ಮಳೆಯ ಅಭಾವದಿಂದ ಬಾಡುತ್ತಿರುವ ಬೆಳೆ</p></div>

ತೇವಾಂಶ ಕೊರತೆ, ಮಳೆಯ ಅಭಾವದಿಂದ ಬಾಡುತ್ತಿರುವ ಬೆಳೆ

   

ಚಿಕ್ಕಬಳ್ಳಾಪುರ: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದೆ. ನದಿಗಳು, ಜಲಾಶಯಗಳು ಉಕ್ಕಿ ಹರಿಯುತ್ತಿವೆ. ಆದರೆ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತ ಸ್ಥಿತಿ ಇದೆ. 

ಜಿಲ್ಲೆಯಲ್ಲಿ ಮಳೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಜು.8ರ ಅಂತ್ಯಕ್ಕೆ ಜಿಲ್ಲೆಯಲ್ಲಿ ವಾಡಿಕೆ ಮಳೆ 15.3 ಮಿ.ಮೀ ಸುರಿಯಬೇಕಿತ್ತು. ಕಳೆದ ವರ್ಷ ಈ ಅವಧಿಯಲ್ಲಿ 19.7 ಮಿ.ಮೀ ಮಳೆ ಸುರಿದಿತ್ತು. ಆದರೆ ಈ ಬಾರಿ ಜು.8ರ ಅಂತ್ಯಕ್ಕೆ ಕೇವಲ 4.4 ಮಿ.ಮೀ ಮಳೆ ಮಾತ್ರ ಸುರಿದಿದೆ. ಹೀಗೆ ದೊಡ್ಡ ಪ್ರಮಾಣದಲ್ಲಿಯೇ ಮಳೆ ಕೊರತೆ ಬಾಧಿಸುತ್ತಿದೆ.  

ADVERTISEMENT

ಜೂನ್‌ನಿಂದಲೂ ಜಿಲ್ಲೆಯಲ್ಲಿ ಮಳೆಯ ಕೊರತೆ ಕಾಡುತ್ತಿದೆ. ಜೂ.30ರ ಅಂತ್ಯಕ್ಕೆ 64.1 ಮಿ.ಮೀ ವಾಡಿಕೆ ಮಳೆ ಸುರಿಯಬೇಕಿತ್ತು. 2024ರಲ್ಲಿ 122 ಮಿ.ಮೀ ಮಳೆ ಸುರಿದಿತ್ತು. ಈ ವರ್ಷದ ಜೂನ್ ಅಂತ್ಯಕ್ಕೆ ಕೇವಲ 46.7 ಮಿ.ಮೀ ಮಳೆ ಸುರಿದಿದೆ. ಜೂನ್‌ನಲ್ಲಿ ಎದುರಾಗಿದ್ದ ಮಳೆ ಕೊರತೆ ಜುಲೈನಲ್ಲಿಯೂ ‌ಮುಂದುವರಿದಿದೆ.

ಮುಂಗಾರು ಆರಂಭದ ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿತ್ತು. ಮೇ ಅಂತ್ಯಕ್ಕೆ ವಾಡಿಕೆ ಮಳೆಯು 67 ಮಿ.ಮೀ ಇತ್ತು. ಕಳೆದ ವರ್ಷ ಈ ಅವಧಿಯಲ್ಲಿ 95 ಮಿ.ಮೀ ಮಳೆ ಸುರಿದಿತ್ತು. ಈ ವರ್ಷ 142.6 ಮಿ.ಮೀ ಮಳೆ ಸುರಿದಿತ್ತು.

ಹೀಗೆ ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಸುರಿದ ಕಾರಣ ರೈತರು ಈ ಬಾರಿ ಒಳ್ಳೆಯ ಮಳೆ ಸುರಿಯುತ್ತದೆ. ಉತ್ತಮ ಫಸಲು ದೊರೆಯುತ್ತದೆ ಎನ್ನುವ ನಿರೀಕ್ಷೆಯನ್ನು ಅಪಾರವಾಗಿ ಹೊಂದಿದ್ದರು. ತೊಗರಿ ಮತ್ತು ಶೇಂಗಾ ಬಿತ್ತನೆಯ ಅವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆದರೆ ಇನ್ನೂ ಸಹ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿಲ್ಲ.

ಜೂನ್ ತಿಂಗಳಲ್ಲಿ ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಸುರಿಯಿತು. ಈಗಲೂ ಆ ತುಂತುರು ಮಳೆ ಮುಂದುವರಿದಿದೆ.  

ಮಳೆ ಕೊರತೆಯು ಬಿತ್ತನೆಗೆ ದೊಡ್ಡ ಪೆಟ್ಟು ನೀಡಿದೆ. ವಿಶೇಷವಾಗಿ ತೊಗರಿ ಮತ್ತು ಶೇಂಗಾ ಬೆಳೆಯ ಮೇಲೆ ಪರಿಣಾಮ ಬೀರಿದೆ. ಕೃಷಿ ಇಲಾಖೆ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಜಿಲ್ಲೆಯಲ್ಲಿ 1,32,796 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿದೆ. ಇಲ್ಲಿಯವರೆಗೆ 3,578 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಶೇ 2.69ರಷ್ಟು ಮಾತ್ರ ಗುರಿ ಸಾಧನೆಯಾಗಿದೆ.

ಜಿಲ್ಲೆಯಲ್ಲಿ 20,230 ಹೆಕ್ಟೇರ್‌ನಲ್ಲಿ ಎಣ್ಣೆ ಕಾಳುಗಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ 991 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. 8,100 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಗುರಿ ಹೊಂದಿದ್ದು ಕೇವಲ 258 ಹೆಕ್ಟೇರ್ ಬಿತ್ತನೆಯಾಗಿದೆ. 1,04,266 ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳ ಬಿತ್ತನೆಯ ಗುರಿ ಹೊಂದಿದ್ದು 2,329 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.

ಬಾಗೇಪಲ್ಲಿಯಲ್ಲಿ ಮಾತ್ರ ಇಲ್ಲಿಯವರೆಗೂ ಒಂದು ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣವಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಕನಿಷ್ಠ ಒಂದು ಸಾವಿರ ಹೆಕ್ಟೇರ್ ಬಿತ್ತನೆಯೂ ಪೂರ್ಣವಾಗಿಲ್ಲ. ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಳೆಯ ಕೊರತೆ ತೀವ್ರವಾಗಿಯೇ ಬಾಧಿಸಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೇವಲ 152 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.

ಹೀಗೆ ಮಳೆಯ ಕೊರತೆಯು ಜಿಲ್ಲೆಯ ರೈತ ಸಮುದಾಯವನ್ನು ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.