ADVERTISEMENT

ಚಿಂತಾಮಣಿ | ಬಾರದ ಮಳೆ; ಬಿಸಿಲಿನ ತಾಪ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 14:37 IST
Last Updated 17 ಜೂನ್ 2023, 14:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಂತಾಮಣಿ: ಜೂನ್ ಮೂರನೇ ವಾರ ಮುಕ್ತಾಯವಾಗುತ್ತಿದ್ದರೂ ಮುಂಗಾರು ಮಳೆಯಾಗದೆ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ತಾಲ್ಲೂಕಿನಲ್ಲಿ ಬಿಸಿಲಿನ ಝಳ ಏರಿಕೆಯಾಗುತ್ತಿದೆ. ಬಿಸಿಲಿನ ತಾಪದಿಂದ ಜನರು ಬಸವಳಿಯುತ್ತಿದ್ದಾರೆ. ಟೇಬಲ್ ಫ್ಯಾನ್, ಸೀಲಿಂಗ್ ಫ್ಯಾನ್, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಕೆಲವು ದಿನಗಳಿಂದ ಮಳೆಯ ವಾತಾವರಣ ಇರುವುದರಿಂದ ಸೆಕೆ ಮತ್ತಷ್ಟು ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಹಿಂದೆಂದೂ ಕಂಡರಿಯದಷ್ಟು ಪ್ರಮಾಣದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ಬೇಗೆಗೆ ಜನರು ಬಸವಳಿದಿದ್ದಾರೆ. ಕಳೆದ 2 ವರ್ಷಗಳು ಉತ್ತಮ ಮಳೆಯಾಗಿದ್ದು ಸತತ ಬರಗಾಲ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡಿತ್ತು. ಈ ವರ್ಷದಲ್ಲಿ ಮಳೆ ಬಾರದಿರುವುದರಿಂದ ಮತ್ತೆ ಬರಗಾಲದ ಚಾಯೆ ಕಾಣುತ್ತಿದೆ.

ADVERTISEMENT

ಸ್ವಲ್ಪ ಹೊತ್ತು ಬಿಸಿಲಲ್ಲಿ ನಿಂತರೆ ತಲೆ ತಿರುಗುತ್ತದೆ. ಬೆಳಿಗ್ಗೆಯಿಂದಲೇ ಮನೆ, ಕಚೇರಿಗಳಲ್ಲಿ ಫ್ಯಾನ್ ಹಾಕಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಇದೆ ಎಂದು ಸರ್ಕಾರಿ ನೌಕರ ವೆಂಕಟೇಶ್ ತಿಳಿಸಿದರು.

ನಗರ ಪ್ರದೇಶದ ಜನರು ಫ್ಯಾನ್, ಕೂಲರ್ ಇತರೆ ಹವಾನಿಯಂತ್ರಣ ಪರಿಕರಗಳಿಗೆ ಮೊರೆಹೋಗುತ್ತಿದ್ದಾರೆ. ಆದರೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಅನಿಯಮಿತವಾಗಿ ವಿದ್ಯುತ್ ಕೈಕೊಡುತ್ತದೆ. 

ಒಂದೆರಡು ಬಾರಿ ಉತ್ತಮ ಮಳೆಯಾದರೆ ಸೆಕೆ ಕಡಿಮೆಯಾಗುತ್ತದೆ. ವಾತಾವರಣದ ಏರುಪೇರಿನಿಂದ ಮಕ್ಕಳ, ವೃದ್ಧರ ಹಾಗೂ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜ್ವರ ಮತ್ತಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ವೃದ್ಧರು ಮತ್ತು ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಕಂಡುಬರುತ್ತದೆ. ಮಕ್ಕಳು ಹಾಗೂ ವೃದ್ಧರು ಹೆಚ್ಚಾಗಿ ನೀರು ಕುಡಿಯಬೇಕು. ಶುದ್ಧ ನೀರು, ಎಳನೀರನ್ನು ಸೇವಿಸುವುದು ಉತ್ತಮ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.