ADVERTISEMENT

ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಿ

ಕೇಂದ್ರ ಜಲಶಕ್ತಿ ತಂಡದಿಂದ ವಿವಿಧ ಸ್ಥಳಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 13:07 IST
Last Updated 12 ಜುಲೈ 2019, 13:07 IST
ಕಣಿವೆ ನಾರಾಯಣಪುರದಲ್ಲಿ ಅರಣ್ಯ ಇಲಾಖೆಯ ತೋಪಿಗೆ ಭೇಟಿ ನೀಡಿದ ಅಧಿಕಾರಿಗಳು
ಕಣಿವೆ ನಾರಾಯಣಪುರದಲ್ಲಿ ಅರಣ್ಯ ಇಲಾಖೆಯ ತೋಪಿಗೆ ಭೇಟಿ ನೀಡಿದ ಅಧಿಕಾರಿಗಳು   

ಚಿಕ್ಕಬಳ್ಳಾಪುರ: ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಂಕಜ್‌ಕುಮಾರ್ ನೇತೃತ್ವದ ಕೇಂದ್ರ ಜಲಶಕ್ತಿ ತಂಡದ ಅಧಿಕಾರಿಗಳು ಶುಕ್ರವಾರ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ಜಲ ಮತ್ತು ಅರಣ್ಯ ರಕ್ಷಣೆಗೆ ಸಂಬಂಧಿತ ಕಾಮಗಾರಿಗಳನ್ನು ವೀಕ್ಷಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕಣಿವೆ ನಾರಾಯಣಪುರದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ 50 ಹೆಕ್ಟರ್ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಿರುವ ತೋಪು, ಚದಲಪುರ ದೊಡ್ಡಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ, ಚಿಕ್ಕಬಳ್ಳಾಪುರದ ಭಾರತಿನಗರದ 20ನೇ ವಾರ್ಡ್‌ನಲ್ಲಿರುವ ಕಲ್ಯಾಣಿಗೆ ಅಧಿಕಾರಿಗಳು ಭೇಟಿ ನೀಡಿದರು.

‘ಕಂದವಾರ ಕೆರೆಯಲ್ಲಿ ಎಚ್.ಎನ್.ವ್ಯಾಲಿ ನೀರು ಸಂಗ್ರಹಿಸಲು ಕೈಗೊಂಡ ಕಾಮಗಾರಿ, ರಂಗಸ್ಥಳದ ಕಲ್ಯಾಣಿ, ಪೋಶೆಟ್ಟಿಹಳ್ಳಿಯಲ್ಲಿ ನರೇಗಾ ಯೋಜನೆ ಅಡಿ ನಿರ್ಮಿಸಿದ ಚೆಕ್‌ಡ್ಯಾಂ, ಪೋಶೆಟ್ಟಿಹಳ್ಳಿ ಮತ್ತು ಮಂಚೇನಹಳ್ಳಿ ಅರಣ್ಯ ಪ್ರದೇಶ ಹಾಗೂ ಗೌರಿಬಿದನೂರು ತಾಲ್ಲೂಕಿನ ಗೌಡಗೆರೆಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ನೀರು ಸಂಗ್ರಹ ಕಾಮಗಾರಿಗಳನ್ನು ತಂಡ ವೀಕ್ಷಿಸಿತು.

ADVERTISEMENT

ಈ ವೇಳೆ ಪಂಕಜ್‌ಕುಮಾರ್, ‘ಮಳೆ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಕಲ್ಯಾಣಿಗಳನ್ನು ಶುದ್ಧೀಕರಣಗೊಳಿಸಬೇಕು. ಅಣೆಕಟ್ಟುಗಳನ್ನು ನಿರ್ಮಿಸಬೇಕು. ಮಳೆ ನೀರು ಸಂರಕ್ಷಣೆ ಮತ್ತು ಮನೆ ಬಳಕೆ ನೀರಿನ ಮರುಬಳಕೆ ಕುರಿತಂತೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಅವರು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರವಿಂದ್ರನಾಥ್ ತಲವಾಡೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.