
ಚಿಕ್ಕಬಳ್ಳಾಪುರ: ಲೇಖಕಿ ಹಾಗೂ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೊದಲ ಕುಲಸಚಿವೆ ಎನ್ನುವ ಹಿರಿಮೆಗೆ ಪಾತ್ರರಾಗಿರುವ ಶಿಡ್ಲಘಟ್ಟ ತಾಲ್ಲೂಕಿನ ವೆಂಕಟಾಪುರದ ಆರ್.ಸುನಂದಮ್ಮ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಜಿಲ್ಲೆಯ ರಾಮಯ್ಯ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಜಿಲ್ಲೆಗೆ ಹಿರಿಮೆ ತಂದಿದ್ದಾರೆ.
ಸುನಂದಮ್ಮ ವೆಂಕಟಾಪುರದ ರಾಮಯ್ಯ ಮತ್ತು ನಾರಾಯಣಮ್ಮ ದಂಪತಿ ಪುತ್ರಿ. ಸ್ವಗ್ರಾಮ ವೆಂಕಟಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪಡೆದರು.
ಮೈಸೂರು ವಿಶ್ವವಿದ್ಯಾಲಯ ಮತ್ತು ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಅವರ ವೃತ್ತಿಯ ಪ್ರಮುಖ ಕಾರ್ಯಕ್ಷೇತ್ರ ಅಕ್ಕಮಹಾದೇವಿ ವಿ.ವಿ.
ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕರು, ಕನಕದಾಸನ ಅಧ್ಯಯನ ಪೀಠದ ಸಂಯೋಜನರು, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರು, ಇದೇ ಕೇಂದ್ರದ ನಿರ್ದೇಶಕರು, ಆರ್ಥಿಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದರು.
2018ರಿಂದ 2022ರವರೆಗೆ ವಿ.ವಿಯ ಮೊದಲ ಕುಲಸಚಿವೆಯಾಗಿ ಕೆಲಸ ನಿರ್ವಹಿಸಿದರು.
ಉತ್ತಮ ಆಡಳಿತಗಾರರೂ ಆಗಿರುವ ಆರ್.ಸುನಂದಮ್ಮ ಸಾಹಿತ್ಯ ಕ್ಷೇತ್ರದಲ್ಲಿಯೂ ಹೆಜ್ಜೆ ಗುರುತು ಮೂಡಿಸಿದ್ದಾರೆ. ಕತೆ, ಕಾವ್ಯ, ಕಾದಂಬರಿ, ಸಂಶೋಧನೆ ಮತ್ತು ವೈಚಾರಿಕ ಲೇಖನಗಳನ್ನು ರಚಿಸಿದ್ದಾರೆ ಮತ್ತು ಸಂಪಾದಿಸಿದ್ದಾರೆ.
‘ಜನಪದ ಕಾವ್ಯ ಸಮೀಕ್ಷೆ’, ‘ಸಂಗಾತಿರೂವ್ವ ಬರೆಸೇನಾ’ ಜನಪದ ಕಾವ್ಯ ಸಂಗ್ರಹ, ‘ಪರಿವರ್ತನೆ’ ಕಥಾ ಸಂಕಲನ, ‘ಲೇಬರ್ ವಾರ್ಡಿನಲ್ಲೊಂದು ದಿನ’, ‘ನೆತ್ತಿಸುಟ್ಟ ಕಾಲ’ ಕವನ ಸಂಕಲನ, ‘ಮಹಿಳಾ ಸಂಸ್ಕೃತಿ’ ಮತ್ತಿತರ ಕೃತಿಗಳನ್ನು ರಚಿಸಿದ್ದಾರೆ.
ಅವರ ‘ದ್ವಿತ್ವ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಭರತಕಲ್ಪ’ ಕಾದಂಬರಿಗೆ ದ್ವಾರನಕುಂಟೆ ಪಾತಣ್ಣ ಪ್ರಶಸ್ತಿ ದೊರೆತಿದೆ. ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ರಾಜ್ಯ ಪ್ರಶಸ್ತಿ, ಇಂದಿರಾಗಾಂಧಿ ವಿಶಿಷ್ಟ ಸೇವಾ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತಿನಿಂದ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ, ರಾಜ್ಯ ಸರ್ಕಾರದ ಅಕ್ಕಮಹಾದೇವಿ ಪ್ರಶಸ್ತಿ, ಕನಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಲವು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಹೀಗೆ ಮಹಿಳಾ ಸಬಲೀಕರಣ, ಆಡಳಿತ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದ ಅವರ ಕೆಲಸವನ್ನು ಪರಿಗಣಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಸರ್ಕಾರ ಅವರನ್ನು ಆಯ್ಕೆ ಮಾಡಿದೆ.
‘ಸಂತೋಷ ತಂದಿದೆ’
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಸಂತೋಷ ತಂದಿದೆ. ಶಿಡ್ಲಘಟ್ಟ ತಾಲ್ಲೂಕಿನ ವೆಂಕಟಾಪುರದ ರೈತ ಕುಟುಂಬ ನಮ್ಮದು ಎಂದು ಸುನಂದಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು. 10ನೇ ತರಗತಿವರೆಗೂ ಊರಿನಲ್ಲಿಯೇ ಇದ್ದೆ. ಪದವಿ ಪೂರ್ವ ಶಿಕ್ಷಣಕ್ಕಾಗಿ ಬೆಂಗಳೂರಿಗೆ ತೆರಳಿ ಅಲ್ಲಿಯೇ ಎಂ.ಎ ಪೂರ್ಣಗೊಳಿಸಿದೆ. ಸಾಮಾನ್ಯ ರೈತ ಕುಟುಂಬದಿಂದ ಬೆಳೆದವರು ನಾವು ಎಂದರು.
- ಕೈವಾರ ಧರ್ಮಾಧಿಕಾರಿಗೆ ಪ್ರಶಸ್ತಿ
ಚಿಂತಾಮಣಿ ತಾಲ್ಲೂಕು ಕೈವಾರ ತಾತಯ್ಯ ಅವರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಅವರಿಗೆ ಶಿಕ್ಷಣ ಕ್ಷೇತ್ರದ ಸಾಧನೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಅವರ ಆಯ್ಕೆಗೆ ಬೆಂಗಳೂರು ಜಿಲ್ಲೆಯನ್ನು ಪರಿಗಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.