ADVERTISEMENT

ಚಿಕ್ಕಬಳ್ಳಾಪುರ: ರಾಮಲಿಂಗಪ್ಪ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 14:32 IST
Last Updated 12 ಜನವರಿ 2020, 14:32 IST
ಬಿಜೆಪಿ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಮಲಿಂಗಪ್ಪ (ಎಡದಿಂದ ಮೊದಲನೆಯವರು) ಅವರನ್ನು ಹಾಲಿ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅಭಿನಂದಿಸಿದರು.
ಬಿಜೆಪಿ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಮಲಿಂಗಪ್ಪ (ಎಡದಿಂದ ಮೊದಲನೆಯವರು) ಅವರನ್ನು ಹಾಲಿ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅಭಿನಂದಿಸಿದರು.   

ಚಿಕ್ಕಬಳ್ಳಾಪುರ: ಬಿಜೆಪಿ ಜಿಲ್ಲಾ ಘಟಕಕ್ಕೆ ಭಾನುವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಬಾಗೇಪಲ್ಲಿಯ ರಾಮಲಿಂಗಪ್ಪ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಕಳೆದ ಲೋಕಸಭೆ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುತ್ತಿದ್ದಂತೆ ಕೇಸರಿ ಪಾಳೆಯದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಏರಲು ಮುಖಂಡರ ನಡುವೆ ತೆರೆಮರೆಯ ಪೈಪೋಟಿ ನಡೆದಿತ್ತು.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾರಣ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಿಂದೆಂದಿಗಿಂತಲೂ ಈ ಬಾರಿ ‘ಬೇಡಿಕೆ’ ಹೆಚ್ಚಿತ್ತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅವರ ಉತ್ತರಾಧಿಕಾರಿಯಾಗಲು ಅನೇಕ ಮುಖಂಡರು ತಮ್ಮ ನಾಯಕರ ಮೂಲಕ ರಾಜ್ಯ ಮಟ್ಟದಲ್ಲಿ ‘ಲಾಬಿ’ ನಡೆಸಿದ್ದರು ಎನ್ನಲಾಗಿದೆ.

ADVERTISEMENT

ಪದಾಧಿಕಾರಿಗಳ ಆಯ್ಕೆ ಸಮಿತಿ ಆಕಾಂಕ್ಷಿಗಳ ಕುರಿತಂತೆ ಜಿಲ್ಲೆಯಲ್ಲಿರುವ ಬಿಜೆಪಿಯ ಮುಖಂಡರ ಬಳಿ ಅಭಿಪ್ರಾಯ ಸಂಗ್ರಹಿಸುವ ಜತೆಗೆ, ಆಕಾಂಕ್ಷಿಗಳ ಪೂರ್ವಾಪರ ಪರಿಶೀಲನೆ ನಡೆಸಿ, ಅಳೆದು ತೂಗಿ ಆರು ಅಭ್ಯರ್ಥಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿ, ಅಂತಿಮ ಆಯ್ಕೆಗಾಗಿ ರಾಜ್ಯಮಟ್ಟದ ವರಿಷ್ಠರಿಗೆ ಕಳುಹಿಸಿಕೊಟ್ಟಿತ್ತು.

ಈ ಪೈಕಿ ವರಿಷ್ಠರು ಬಿಜೆಪಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಹಿರಿಯ ಮುಖಂಡ ರಾಮಲಿಂಗಪ್ಪ ಅವರಿಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ.

ರಾಮಲಿಂಗಪ್ಪ ಅವರು ಈ ಹಿಂದೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ, ಬಿಜೆಪಿ ರಾಜ್ಯ ಕಾರಕಾರಣಿ ಸದಸ್ಯ ಕೂಡ ಆಗಿದ್ದರು.

’ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿಯುತವಾದ ಹುದ್ದೆ ಕೊಟ್ಟಿದ್ದಾರೆ. ಇವತ್ತು ದೇಶದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಆದರೆ ಜಿಲ್ಲೆಯಲ್ಲಿ ಹಿಂದುಳಿದಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆ ಮಾಡುವ ಕನಸಿದೆ‘ ಎಂದು ಬಿಜೆಪಿ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಾಮಲಿಂಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.