ಚಿಕ್ಕಬಳ್ಳಾಪುರ: ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯಿಂದ ನವೆಂಬರ್‌ನಲ್ಲಿ ಚಿಕ್ಕಬಳ್ಳಾಪುರದ ಎರಡು ಕಡೆ ಜನೌಷಧ ಮಳಿಗೆಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಎಂ.ಜಯರಾಮ್ ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಟಿಎಪಿಸಿಎಂಎಸ್ ಮಳಿಗೆ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಮಳಿಗೆ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಕೇಂದ್ರಗಳ ಆರಂಭದಿಂದ ನಾಗರಿಕರಿಗೆ ಕಡಿಮೆ ಬೆಲೆಗೆ ಔಷಧಗಳು ದೊರೆಯುತ್ತವೆ. ಡಯಾಬಿಟಿಸ್, ಹೃದ್ರೋಗ ಸೇರಿದಂತೆ ಹಲವು ರೋಗಿಗಳಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ಆ.15ರಿಂದ ಪ್ಲೇಟ್‌ಲೈಟ್ ತಯಾರಿಕೆಗೂ ಜಿಲ್ಲಾ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದಲ್ಲಿ ಚಾಲನೆ ನೀಡಲಾಗುತ್ತದೆ. ಡೆಂಗಿ ಮತ್ತಿತರ ರೋಗಿಗಳಿಗೆ ಪ್ಲೇಟ್‌ಲೆಟ್‌ಗಳು ಅವಶ್ಯ. ಇಲ್ಲಿಯವರೆಗೆ ಸಂಸ್ಥೆಯಲ್ಲಿ ಪ್ಲೇಟ್‌ಲೆಟ್ ತಯಾರಿಕೆ ಇರಲಿಲ್ಲ. ಈಗ ಈ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ವಿವರಿಸಿದರು.
ಆರೋಗ್ಯ, ಅರಿವು ಮತ್ತು ಸ್ವಚ್ಛತೆ ಬಗ್ಗೆ ಪ್ರತಿ ಮನೆಗಳಲ್ಲಿ ಜಾಗೃತಿ ಸಹ ಮೂಡಿಸಲು ಸಂಸ್ಥೆ ಹೆಜ್ಜೆ ಇಟ್ಟಿದೆ. ಇದಕ್ಕೆ ಹಲವು ಸಂಘ ಸಂಸ್ಥೆಗಳು ಸಹ ಸಹಕಾರ ನೀಡುವ ಭರವಸೆ ನೀಡಿವೆ. ಗ್ರಾಮಗಳಲ್ಲಿ ಸ್ವಚ್ಛತೆ, ಗಿಡನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯು ತನ್ನ 13 ವರ್ಷಗಳ ಪಯಣದಲ್ಲಿ 1,00,641 ಯುನಿಟ್ ರಕ್ತ ಸಂಗ್ರಹಿಸಿ ವಿತರಿಸಿದೆ. ಇಷ್ಟೇ ಪ್ರಮಾಣದಲ್ಲಿ ಪ್ಲಾಸ್ಮಾ ಸಹ ವಿತರಿಸಿದೆ. 1,222 ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ನಡೆಸಲಾಗಿದೆ. ದಿನದ 24 ಗಂಟೆಯೂ ರಕ್ತ ವಿತರಿಸಲಾಗುತ್ತಿದೆ. ಜಿಲ್ಲೆಯ ರಕ್ತನಿಧಿ ಕೇಂದ್ರಕ್ಕೆ ವಾರ್ಷಿಕ 12 ಸಾವಿರ ಯುನಿಟ್ ಬೇಡಿಕೆ ಇದೆ. ಆದರೆ 6 ಸಾವಿರದಿಂದ 7 ಸಾವಿರ ಯುನಿಟ್ ಸಂಗ್ರಹವಾಗುತ್ತಿದೆ ಎಂದು ಹೇಳಿದರು.
ಒಂದು ಯುನಿಟ್ ರಕ್ತವನ್ನು ಸರ್ಕಾರಿ ಆಸ್ಪತ್ರೆಗೆ ನೀಡಲು ₹775 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹1,550 ದರವನ್ನು ಆರೋಗ್ಯ ಇಲಾಖೆ ನಿಗದಿಗೊಳಿಸಿದೆ. ಆದರೆ ನಾವು ಸರ್ಕಾರಿ ಆಸ್ಪತ್ರೆಗಳಿಗೆ ₹ 650 ಮತ್ತು ಖಾಸಗಿ ಆಸ್ಪತ್ರೆಗೆ ₹900 ದರದಲ್ಲಿ ರಕ್ತ ನೀಡುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಪ್ರೊ.ಕೋಡಿ ರಂಗಪ್ಪ, ಕಾರ್ಯದರ್ಶಿ ರವಿಕುಮಾರ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.