ADVERTISEMENT

ಪರಿಶಿಷ್ಟರಿಗೆ ಕಲ್ಯಾಣ ಮಂಟಪ ನಿರಾಕರಣೆ: ತಹಶೀಲ್ದಾರ್‌ಗೆ ದೂರು

ಮುಜರಾಯಿ ಇಲಾಖೆಗೆ ಸೇರಿದ ದೇಗುಲ ಸಮಿತಿ ವಿರುದ್ಧ ತಹಶೀಲ್ದಾರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 21:31 IST
Last Updated 4 ನವೆಂಬರ್ 2022, 21:31 IST
ಗುಡಿಬಂಡೆ ಪಟ್ಟಣದ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಮುಂಭಾಗ ಪರಿಶಿಷ್ಟ ಜಾತಿಯ ವೆಂಕಟಲಕ್ಷ್ಮಿ ಮತ್ತು ಮಹೇಶ್ ವಿವಾಹ ನಡೆದ ಕ್ಷಣ
ಗುಡಿಬಂಡೆ ಪಟ್ಟಣದ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಮುಂಭಾಗ ಪರಿಶಿಷ್ಟ ಜಾತಿಯ ವೆಂಕಟಲಕ್ಷ್ಮಿ ಮತ್ತು ಮಹೇಶ್ ವಿವಾಹ ನಡೆದ ಕ್ಷಣ   

ಗುಡಿಬಂಡೆ (ಚಿಕ್ಕಬಳ್ಳಾಪುರ ಜಿಲ್ಲೆ): ಮುಜರಾಯಿ ಇಲಾಖೆಗೆ ಸೇರಿದ ಪಟ್ಟಣದ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಕಲ್ಯಾಣ ಮಂಟಪವನ್ನು ಪರಿಶಿಷ್ಟ ಜಾತಿಯವರ ವಿವಾಹಕ್ಕೆ ನೀಡಲು ನಿರಾಕರಿಸಿರುವುದು ಗೊತ್ತಾಗಿದೆ.

ತಾಲ್ಲೂಕಿನ ಬ್ರಾಹ್ಮಣರಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ವೆಂಕಟರಾಯಪ್ಪ ಅವರ ಪುತ್ರಿ ವೆಂಕಟಲಕ್ಷ್ಮಿ ಮತ್ತು ಬಾಗೇಪಲ್ಲಿಯ ಮಹೇಶ್ ಎಂಬುವರ ವಿವಾಹ ನ. 3ರಂದು ನಿಶ್ಚಯವಾಗಿತ್ತು. ವಿವಾಹಕ್ಕೂ 15 ದಿನ ಮುಂಚೆಯೇ ವಧುವಿನ ಸಹೋದರಆವುಲಕೊಂಡಪ್ಪ ದೇವಾಲಯ ಸಮಿತಿಯ ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರ ಬಳಿ ಬಂದು, ‘ನನ್ನ ತಂಗಿಯ ವಿವಾಹವಿದ್ದು ದೇಗುಲದ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಿ’ ಎಂದು ಕೋರಿದ್ದರು.

3ರಂದು ಬೇರೊಂದು ವಿವಾಹಕ್ಕೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಲಾಗಿದೆ ಎಂದುವೆಂಕಟರಾಯಪ್ಪ ತಿಳಿಸಿದ್ದರು. 3ರಂದು ವಧು, ವರ ಹಾಗೂ ಅವರ ಸಂಬಂಧಿಕರು ‌ದೇವಾಲಯದ ಮುಂಭಾಗ ಮದುವೆ ಮಾಡಿಕೊಳ್ಳಲು ಬಂದಿದ್ದರು. ಆಗ ದೇವಾಲಯ ಮತ್ತು ಕಲ್ಯಾಣ ಮಂಟಪಕ್ಕೆ ಬೀಗ ಹಾಕಲಾಗಿತ್ತು. ಯಾವುದೇ ಮದುವೆ ಸಮಾರಂಭ ನಡೆಯುತ್ತಿರಲಿಲ್ಲ. ವಧು–ವರ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಹಿನ್ನೆಲೆಯಲ್ಲಿಯೇ ವೆಂಕಟರಾಯಪ್ಪ ಕಲ್ಯಾಣ ಮಂಟಪ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ADVERTISEMENT

‘ನಾವು ಪರಿಶಿಷ್ಟ ಜಾತಿಗೆ ಸೇರಿದ ಕಾರಣದಿಂದ ನಮಗೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಲು ನಿರಾಕರಿಸಲಾಗಿದೆ. 3ರಂದು ಯಾವುದೇ ವಿವಾಹ ಇರಲಿಲ್ಲ. ಹೀಗಿದ್ದರೂ ನಮಗೆ ಸುಳ್ಳು ಹೇಳಿದ್ದಾರೆ. ದೇವಾಲಯ ಸಮಿತಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆವುಲಕೊಂಡಪ್ಪ ಅವರು ಗುಡಿಬಂಡೆ ತಹಶೀಲ್ದಾರ್‌ಗೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ.

ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.

‘ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಜಾತಿ ಆಧಾರದಲ್ಲಿ ಕಲ್ಯಾಣ ಮಂಟಪವನ್ನು ನಿರಾಕರಿಸಲಾಗಿದೆ. ದೇಗುಲ ಅಡಳಿತ ಮಂಡಳಿಯನ್ನು ರದ್ದು ಮಾಡಬೇಕು. ಅಡಳಿತಾಧಿಕಾರಿ ನೇಮಿಸಬೇಕು’ ಎಂದುದಲಿತ ಸಂಘರ್ಷ ಸಮಿತಿ ಮುಖಂಡ ಜಿ.ವಿ. ಗಂಗಪ್ಪ ಆಗ್ರಹಿಸಿದರು.

‘ಈ ವಿಚಾರದಲ್ಲಿ ದೂರು ಬಂದಿದೆ. ದೇವಾಲಯಕ್ಕೆ ಸರ್ಕಾರದಿಂದ ಧರ್ಮದರ್ಶಿ ಮಂಡಳಿ ನೇಮಕವಾಗಿಲ್ಲ. ಗಣ್ಯರು ಸೇರಿ ದೇವಾಲಯದ ಅಭಿವೃದ್ಧಿ ಸಮಿತಿ ರಚಿಸಿಕೊಂಡಿದ್ದಾರೆ. ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರಿಗೆ ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅವರಿಂದ ಮಾಹಿತಿ ಬಂದ ನಂತರ, ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಸಿಗ್ಬತ್‌ ಉಲ್ಲಾ ‘ಪ್ರಜಾವಾಣಿ’ಗೆ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.