ADVERTISEMENT

ಜೀತವಿಮುಕ್ತರಿಗೆ ದೊರೆಯದ ಪುನರ್ವಸತಿ: ಜಿಲ್ಲಾಡಳಿತದ ವಿರುದ್ಧ ಜೀವಿಕ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 3:36 IST
Last Updated 22 ಅಕ್ಟೋಬರ್ 2021, 3:36 IST

ಚಿಕ್ಕಬಳ್ಳಾಪುರ: ಜಿಲ್ಲಾಡಳಿತವು ಜಿಲ್ಲೆಯಲ್ಲಿ ಜೀತ ವಿಮುಕ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿಲ್ಲ. ಇನ್ನೂ ಇವರ ಬದುಕು ಸುಧಾರಿಸಿಲ್ಲ ಎಂದು ಜೀತ ವಿಮುಕ್ತ ಕರ್ನಾಟಕ (ಜೀವಿಕ) ಸಂಘಟನೆಯ ರಾಜ್ಯ ಸಂಚಾಲಕ ಗೋಪಾಲ್ ದೂರಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1998ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಸಂಘಟನೆ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ 2016ರಿಂದ 2021ರವರೆಗೆ 850 ಜೀತದಾಳುಗಳು ವಿಮುಕ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ 24 ಗಂಟೆಯ ಒಳಗೆ ಬಿಡುಗಡೆ ಪತ್ರ ನೀಡಬೇಕು. ಆದರೆ, ಇದುವರೆಗೂ ಜಿಲ್ಲಾಡಳಿತ ಕ್ರಮವಹಿಸಿಲ್ಲ ಎಂದು ದೂರಿದರು.

ಜೀತ ವಿಮುಕ್ತರ ಮಕ್ಕಳಿಗೆ ಶಿಕ್ಷಣ ಸೌಲಭ್ಯ, ವಿದ್ಯಾರ್ಥಿ ವೇತನ ನೀಡಬೇಕು. ಆದರೆ, ಆ ಯಾವ ಸೌಲಭ್ಯಗಳು ದೊರೆತಿಲ್ಲ. 22 ಸರ್ಕಾರಿ ಇಲಾಖೆಗಳಿಂದ ಜೀತ ವಿಮುಕ್ತರಿಗೆ ಸೌಲಭ್ಯ ಒದಗಿಸಬೇಕು ಎಂದು ಆದೇಶವಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂದು ಹೇಳಿದರು.

ADVERTISEMENT

ಜೀತ ವಿಮುಕ್ತರಿಗೆ ವಸತಿ, ನಿವೇಶನ, ವಿಶೇಷ ಪ್ಯಾಕೇಜ್ ಅಡಿಯಲ್ಲಿ ಬ್ಯಾಂಕ್‌ನಿಂದ ಸಾಲ ನೀಡಬೇಕು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ಜೀವಿಕಾ ರಾಜ್ಯ ಸಂಚಾಲಕಿ ರತ್ನಮ್ಮ ಮಾತನಾಡಿ, ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಸೂಕ್ತ ಶೌಚಾಲಯಗಳ ವ್ಯವಸ್ಥೆ ಇಲ್ಲ. ಮಳೆಯಿಂದ ಕ್ವಾರಿಗಳಲ್ಲಿ ನೀರು ತುಂಬಿದೆ. ಕಾರ್ಮಿಕರು ಕಷ್ಟಪಡುತ್ತಿದ್ದಾರೆ. ಜಿಲ್ಲಾಡಳಿತ ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಬೇಕು ಎಂದು
ಹೇಳಿದರು.

ಜೀವಿಕ ಸಂಘಟನೆ ರವೀಂದ್ರನಾಥ್, ಚಂದ್ರು, ನಾರಾಯಣಸ್ವಾಮಿ, ರಾಮಾಂಜನೇಯ, ಅಶ್ವತ್ಥಪ್ಪ, ಪಿ.ವಿ. ಮುನಿಯಪ್ಪ, ಸಿ.ಎಂ. ಮೂರ್ತಿ ಸುದ್ದಿಗೋಷ್ಠಿಯಲ್ಲಿಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.