ADVERTISEMENT

ಬಾಕಿ ಗೌರವಧನ ಬಿಡುಗಡೆ ಮಾಡಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:50 IST
Last Updated 2 ಡಿಸೆಂಬರ್ 2022, 4:50 IST
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ ನೌಕರರು ಪ್ರತಿಭಟಿಸಿದರು
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ ನೌಕರರು ಪ್ರತಿಭಟಿಸಿದರು   

ಚಿಕ್ಕಬಳ್ಳಾಪುರ: ಬಾಕಿಯಿರುವ ಮೂರು ತಿಂಗಳ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ನಿಗದಿತ ಅವಧಿಯ ಒಳಗೆ ಮೊಟ್ಟೆಗಳನ್ನು ಪೂರೈಸಬೇಕು. ಗ್ಯಾಸ್ ಸ್ಟೌಗಳು ಹಾಳಾಗಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು–ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನಾಡಿ ಸಿಬ್ಬಂದಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, ‘ಅಂಗನವಾಡಿಗಳು ಹಲವು ಸಮಸ್ಯೆಗಳಿಂದ ಬಳಲುತ್ತಿವೆ. ಸಮಸ್ಯೆಗಳ ಪರಿಹಾರದ ವಿಚಾರದಲ್ಲಿ ಅಧಿಕಾರಿಗಳು ಮುತುವರ್ಜಿವಹಿಸಬೇಕು’ ಎಂದು ಆಗ್ರಹಿಸಿದರು.

ಬಾಕಿಯಿರುವ ತರಕಾರಿ, ಗ್ಯಾಸ್ ಹಣ ನೀಡಬೇಕು. ಮೂರು ವರ್ಷಗಳಿಂದ ಅಂಗನವಾಡಿಗಳಿಗೆ ಅಡುಗೆ ಸಾಮಗ್ರಿಗಳನ್ನು ನೀಡಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಐಸಿಡಿಎಸ್ ಕೆಲಸಗಳನ್ನು ಮಾತ್ರ ಮಾಡಿಸಬೇಕು. ಇಲಾಖೆಯು ಮೊಬೈಲ್ ಕೊಟ್ಟು ಮೂರ್ನಾಲ್ಕು ವರ್ಷಗಳಾಗಿವೆ. ಅವು ಕೆಲಸ ಮಾಡುತ್ತಿಲ್ಲ. ಅವುಗಳನ್ನು ವಾಪಸ್ ಪಡೆದು ಹೊಸ ಮೊಬೈಲ್ ನೀಡಬೇಕು. ಸಾಕ್ಷರತೆಯಲ್ಲಿ ಅಂಗನವಾಡಿ ನೌಕರರನ್ನು ತೊಡಗಿಸಿಕೊಳ್ಳಬಾರದು ಎಂದು ಹೇಳಿದರು.

ADVERTISEMENT

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಶೂ, ಬ್ಯಾಗ್ ಮತ್ತು ‍ಪುಸ್ತಕಗಳನ್ನು ಉಚಿತವಾಗಿ ನೀಡಬೇಕು. ಕೇಂದ್ರಗಳಿಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಶ್ವತ್ಥಮ್ಮ, ಸುಜಾತಾ, ಮಂಜುಳಾ, ವೆಂಕಟಲಕ್ಷ್ಮಮ್ಮ, ಜಿ.ಪದ್ಮಾ, ಸರೋಜಮ್ಮ, ಭಾಗ್ಯಮ್ಮ, ಕೆ.ರತ್ನಮ್ಮ, ಎಂ.ಪಿ.ಮುನಿರತ್ನಮ್ಮ, ಗುಲ್ಜಾರ್, ಸೌಭಾಗ್ಯಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.