
ಬಂಗಾರಪೇಟೆ: ತಾಲ್ಲೂಕಿನ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಸೋಗಿನಲ್ಲಿ ಸರ್ಕಾರಿ ವಾಹನದಲ್ಲಿ ಶನಿವಾರ ಧರ್ಮ ಪ್ರಚಾರದ ಕರಪತ್ರಗಳನ್ನು ಹಂಚಿಕೆ ಮಾಡಲಾಗುತ್ತಿತ್ತು.
ಇದನ್ನು ಗಮನಿಸಿದ ಸಾರ್ವಜನಿಕರು, ಸರ್ಕಾರಿ ವಾಹನವನ್ನು ತಡೆದು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ಸ್ವಚ್ಛತಾ ವಾಹನದಲ್ಲಿ ಸಿಬ್ಬಂದಿ ಶಶಿಕಲಾ, ನಾಗವೇಣಿ ಹಾಗೂ ವೆಂಕಟರತ್ನ ಅವರು ಮನೆ, ಮನೆಗೆ ತೆರಳಿ ಕಸ ಸಂಗ್ರಹಿಸುವ ಜೊತೆಗೆ ಧಾರ್ಮಿಕ ಸಭೆಯೊಂದರ ಕರಪತ್ರಗಳನ್ನು ಹಂಚುತ್ತಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದೇ 26ರಂದು ಕೆಜಿಎಫ್‌ನಲ್ಲಿ ನಡೆಯಲಿರುವ ಕ್ರಿಶ್ಚಿಯನ್ ಧರ್ಮದ ಸಭೆಗೆ ಸಂಬಂಧಿಸಿದ ಕರಪತ್ರಗಳನ್ನು ಹಂಚಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಸಾರ್ವಜನಿಕ ಕೆಲಸಕ್ಕೆ ಮೀಸಲಿರುವ ವಾಹನ ಮತ್ತು ಸಮಯವನ್ನು ಒಂದು ನಿರ್ದಿಷ್ಟ ಧರ್ಮದ ಪ್ರಚಾರಕ್ಕೆ ಬಳಸುತ್ತಿರುವುದು ಸರಿಯಲ್ಲ. ಇದು ಮತಾಂತರಕ್ಕೆ ಪ್ರಚೋದನೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಸಿಬ್ಬಂದಿ ಕೈಯಲ್ಲಿದ್ದ ಕರಪತ್ರಗಳನ್ನು ಸಾರ್ವಜನಿಕರು ಕಸಿದರು. ಪಂಚಾಯಿತಿ ಸಿಬ್ಬಂದಿಯ ಈ ನಡೆಯನ್ನು ಜನರು ಖಂಡಿಸಿದರು.
ಸರ್ಕಾರಿ ವಾಹನದಲ್ಲಿ ಇಂತಹ ಧಾರ್ಮಿಕ ಪ್ರಚಾರಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಮತ್ತು ಕರಪತ್ರ ಹಂಚಿದ ಸಿಬ್ಬಂದಿ ವಿರುದ್ಧ ಬೂದಿಕೋಟೆ ಪೊಲೀಸರು ಹಾಗೂ ಪಂಚಾಯಿತಿ ಮೇಲಧಿಕಾರಿಗಳು ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರ್ಕಾರಿ ವಾಹನವನ್ನು ಧರ್ಮ ಪ್ರಚಾರಕ್ಕೆ ಬಳಸಿರುವುದು ಕಾನೂನುಬಾಹಿರ. ಈ ಕುರಿತು ಪರಿಶೀಲಿಸಿ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆಎಚ್. ರವಿಕುಮಾರ್ ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯಿತಿ ಬಂಗಾರಪೇಟೆ