ADVERTISEMENT

‘ಧಾರ್ಮಿಕ ಕಾರ್ಯದಿಂದ ಸಾಮರಸ್ಯ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 2:33 IST
Last Updated 15 ನವೆಂಬರ್ 2020, 2:33 IST
ಗೌರಿಬಿದನೂರು ತಾಲ್ಲೂಕಿನ ವಿವಿಧ ದೇವಾಲಯಗಳ‌ ಜೀರ್ಣೋದ್ಧಾರಕ್ಕಾಗಿ ಕೆ.ಎಚ್.ಪಿ. ಫೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ಆರ್ಥಿಕ ನೆರವು ನೀಡಿದರು
ಗೌರಿಬಿದನೂರು ತಾಲ್ಲೂಕಿನ ವಿವಿಧ ದೇವಾಲಯಗಳ‌ ಜೀರ್ಣೋದ್ಧಾರಕ್ಕಾಗಿ ಕೆ.ಎಚ್.ಪಿ. ಫೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ಆರ್ಥಿಕ ನೆರವು ನೀಡಿದರು   

ಗೌರಿಬಿದನೂರು: ಗ್ರಾಮೀಣ ಪ್ರದೇಶಗಳಲ್ಲಿ ‌ನಡೆಯುವ ಧಾರ್ಮಿಕ ‌ಕಾರ್ಯಗಳು ಜನರಲ್ಲಿ ನೆಮ್ಮದಿ ಮತ್ತು ಸಾಮರಸ್ಯ ಮೂಡಿಸುವ ಜತೆಗೆ ಏಕತೆ ಮತ್ತು ಸಮಾನತೆಯನ್ನು ಬೆಳೆಸುತ್ತವೆ. ಇಂತಹ ಕಾರ್ಯಗಳಿಗೆ ಸಹಕಾರಿಯಾಗಲು ಸದಾ ಸಿದ್ಧರಾಗಿರುತ್ತೇವೆ ಎಂದು ಕೆ.ಎಚ್.ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.

ತಾಲ್ಲೂಕಿನ ನಗರಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿನ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ‌ ಆರ್ಥಿಕ‌ ನೆರವು ನೀಡಿ‌ ಅವರು ಮಾತನಾಡಿದರು.

ದೇವಾಲಯಗಳು ಜನರಿಗೆ ನೆಮ್ಮದಿಯ ತಾಣಗಳಾಗಿದ್ದು, ಅನಾದಿಕಾಲದಿಂದಲೂ ಅವುಗಳ ರಕ್ಷಣೆ ಹಾಗೂ ಧಾರ್ಮಿಕ ಆಚರಣೆಗಳು ವೈಶಿಷ್ಟ್ಯತೆಯನ್ನು ಬೆಳೆಸಿವೆ. ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳ ಜೀರ್ಣೋದ್ಧಾರ ಕಾರ್ಯದಿಂದ ಗ್ರಾಮದಲ್ಲಿನ ಜನರಲ್ಲಿ ಸಾಮರಸ್ಯ ಬೆಸೆಯಲು ಕಾರಣವಾಗಿದೆ. ಇದರ ಜತೆಯಲ್ಲಿ ಮುಂಬರುವ ಸ್ಥಳೀಯ ಗ್ರಾ.ಪಂ. ಚುನಾವಣೆಯಲ್ಲಿ ನಮ್ಮ ಬಣದ ಅಭ್ಯರ್ಥಿಗಳನ್ನು ಬೆಂಬಲಿಸಿದಲ್ಲಿ ಸ್ಥಳೀಯವಾಗಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ADVERTISEMENT

ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್ ಮಾತನಾಡಿ, ಕೆಎಚ್‌ಪಿ ಫೌಂಡೇಷನ್ ವತಿಯಿಂದ ತಾಲ್ಲೂಕಿನಲ್ಲಿ ಸಾಕಷ್ಟು ಜನಪರವಾದ ಕಾರ್ಯಗಳನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಗಳನ್ನು ಮಾಡಲು‌ ಜನರ ಆಶೀರ್ವಾದ ಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾ.ಪಂಚುನಾವಣೆಯಲ್ಲಿ ಗೌಡರ ಬಣದ ಅಭ್ಯರ್ಥಿಗಳನ್ನು ಬೆಂಬಲಿಸಿದಲ್ಲಿ ಮೂಲಸೌಕರ್ಯದ ಜತೆಗೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ‌ ಕಾರ್ಯಗಳಿಗೆ ‌ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ನಗರಗೆರೆ ಹೋಬಳಿಯ ವಾಟದಹೊಸಹಳ್ಳಿಯಲ್ಲಿನ ಶ್ರೀಚನ್ನಕೇಶವ ದೇವಾಲಯದ ಅಭಿವೃದ್ಧಿಗಾಗಿ ₹ 1 ಲಕ್ಷ, ಕೊಟ್ಟಪ್ಪನಹಳ್ಳಿ ಗಂಗಮ್ಮ ದೇವಾಲಯದ ಅಭಿವೃದ್ಧಿಗಾಗಿ ₹ 1 ಲಕ್ಷ ಹಾಗೂ ಮಟ್ಟವಲಹಳ್ಳಿ ಮಹೇಶ್ವರಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ₹ 50 ನೆರವನ್ನು ಕೆ.ಎಚ್.ಪಿ ಫೌಂಡೇಷನ್‌ನಿಂದ
ನೀಡಲಾಯಿತು.

ಮುಖಂಡರಾದ ಶ್ರೀನಿವಾಸಗೌಡ, ಅಬ್ದುಲ್ಲಾ, ಶ್ರೀನಾಥ್, ರವಿ, ಮೂರ್ತಿ, ರಾಜಾನಾಯಕ್, ಜಯರಾಮರೆಡ್ಡಿ, ವೆಂಕಟರಾಮರೆಡ್ಡಿ, ವೆಂಕಟರವಣಪ್ಪ, ಮಂಜುನಾಥ್, ಶ್ರೀಧರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.