ADVERTISEMENT

ಶಾಲಾ ಕಾಲೇಜು ಶುಲ್ಕ ಮನ್ನಾಕ್ಕೆ ಆಗ್ರಹ

ಸರ್ಕಾರಕ್ಕೆ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 13:09 IST
Last Updated 16 ಸೆಪ್ಟೆಂಬರ್ 2020, 13:09 IST
ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಅಮರೇಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಅಮರೇಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ಕೋವಿಡ್‌ ಕಾರಣಕ್ಕೆ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಈ ಬಾರಿ ರಾಜ್ಯ ಸರ್ಕಾರ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಶುಲ್ಕ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಮುನಿಕೃಷ್ಣಯ್ಯ, ‘ಕೋವಿಡ್‌ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವೇಚನೆ ಇಲ್ಲದೆ ತೆಗೆದುಕೊಂಡ ಲಾಕ್‌ಡೌನ್‌ ತೀರ್ಮಾನದಿಂದಾಗಿ ದೇಶದಾದ್ಯಂತ ಅಸಂಘಟಿತ ವಲಯದ 16 ಕೋಟಿ, ಸಂಘಟಿತ ವಲಯದ ಎರಡು ಕೋಟಿಗೂ ಅಧಿಕ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.

‘ಒಂದು ಅಂದಾಜಿನ ಪ್ರಕಾಣ ಕೋವಿಡ್ ಹಾಗೂ ಲಾಕ್‌ಡೌನ್‌ನಿಂದ 18 ಕೋಟಿ ಜನರು ಉದ್ಯೋಗ ಕಳೆದುಕೊಂಡು, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಬಹುಪಾಲು ಪೋಷಕರು ಶುಲ್ಕ ಪಾವತಿ ಮಾಡಲಾಗದ ಸ್ಥಿತಿ ತಲುಪಿದ್ದಾರೆ. ಆದ್ದರಿಂದ ಸರ್ಕಾರವು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೊಂದರೆ ಉಂಟು ಮಾಡುವ ಶುಲ್ಕವನ್ನು ಈ ಬಾರಿ ಮನ್ನಾ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಇನ್ನೊಂದೆಡೆ ಶಾಲಾ, ಕಾಲೇಜುಗಳು ಆರಂಭವಾದ ಕಾರಣಕ್ಕೆ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದ್ದು, ಅದಕ್ಕಾಗಿ ಮಕ್ಕಳಿಗೆ ಮೊಬೈಲ್‌ ಕೊಡಿಸಲು ಬಡ ಪೋಷಕರು ಪರದಾಡುವಂತಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರಗಳು ಬಡ ಜನರ ಹಿತ ಕಾಯುವ ನಿಟ್ಟಿನಲ್ಲಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು’ ಎಂದರು.

‘ರಾಜ್ಯದಲ್ಲಿ ಶೇ 40ರಷ್ಟು ವಿದ್ಯಾರ್ಥಿಗಳಿಗೆ ಮೊಬೈಲ್ ಕೊರತೆ ಇದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಆದರೆ, ಕೊರೊನಾ ತಂದಿಟ್ಟ ಸಂಕಷ್ಟದ ಸಮಯದಲ್ಲಿ ಖಾಸಗಿ ಶಾಲೆಗಳು ಮಕ್ಕಳಿಗೆ ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಪೋಷಕರಿಂದ ಹಣ ವಸೂಲಿ ಮಾಡುತ್ತಿವೆ. ಬಡವರು ಹಾಗೂ ಕೂಲಿ ಕಾರ್ಮಿಕರ ಶೋಷಣೆ ತಡೆಯುವ ನಿಟ್ಟಿನಲ್ಲಿ ಶುಲ್ಕ ವಸೂಲಿ ತಡೆಯಬೇಕು’ ಎಂದು ಹೇಳಿದರು.

‘ಖಾಸಗಿ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳ ಒತ್ತಡಕ್ಕೆ ಬೇಸತ್ತು ಅನೇಕ ಪೋಷಕರು ಒಡವೆ, ಆಭರಣಗಳನ್ನು ಒತ್ತೆ ಇಟ್ಟು ಈಗಾಗಲೇ ಶುಲ್ಕ ಪಾವತಿಸಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಅದನ್ನು ಮರುಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು. ನಿಯಮ ಮೀರಿ ಹಣ ವಸೂಲಿ ಮಾಡಿದರೆ ಅಂತಹ ಶಿಕ್ಷಣ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಘಟಕದ ಕಾರ್ಯದರ್ಶಿ ಪಿ.ವಿ.ನಾಗಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಅಪ್ಸರ್ ಪಾಷಾ, ಉಪಾಧ್ಯಕ್ಷ ಎಂ.ಗುರಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಕಾಂತರಾಜು, ಸಂಯೋಜಕರಾದ ದ್ಯಾವಪ್ಪ, ರಹಮತ್ ಉಲ್ಲಾ, ಖಜಾಂಚಿ ಮೌಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.