ADVERTISEMENT

ಎಪಿಎಂಸಿ ಕಾಯ್ದೆ: ಸುಗ್ರಿವಾಜ್ಞೆ ವಾಪಸ್‌ ಪಡೆಯಲು ಆಗ್ರಹ

ತಾಲ್ಲೂಕು ಕಚೇರಿ ಎದುರು ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 13:10 IST
Last Updated 20 ಮೇ 2020, 13:10 IST
ತಾಲ್ಲೂಕು ಕಚೇರಿ ಎದುರು ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿ ಎದುರು ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ರೈತ ಸಮುದಾಯಕ್ಕೆ ಕಂಟಕವಾಗಿರುವ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ)(ಎರಡನೇ ತಿದ್ದುಪಡಿ) ಮಸೂದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಬುಧವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ’ದೇಶದಲ್ಲಿ ಪ್ರತಿಯೊಬ್ಬರೂ ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಸೆಣಸುತ್ತಿರುವಾಗ, ಕೇಂದ್ರ ಸರ್ಕಾರ ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಬಂಡವಾಳಶಾಹಿಗಳ ಪರ ಲಾಬಿಗೆ ಮುಂದಾಗಿದೆ‘ ಎಂದು ಆರೋಪಿಸಿದರು.

’ರಾಜ್ಯ ಸರ್ಕಾರ ರೈತ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಇದ್ದ ನಿರ್ಬಂಧ ಸಡಿಲಿಸಿ, ವಿರೋಧದ ನಡುವೆಯೂ ಸುಗ್ರಿವಾಜ್ಞೆ ಮೂಲಕ ತರಾತುರಿಯಲ್ಲಿ ಮಸೂದೆ ಜಾರಿಗೆ ತರಲು ಮುಂದಾಗಿದೆ‘ ಎಂದು ಹೇಳಿದರು.

ADVERTISEMENT

’ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಿಂದ ಎಪಿಎಂಸಿ ಮುಚ್ಚಲಿವೆ. ವರ್ತಕರು, ನೌಕರರು, ಹಮಾಲರು ಮತ್ತು ಇತರೆ ಕಾರ್ಮಿಕರು ನಿರುದ್ಯೋಗಿಗಳಾಗಲಿದ್ದಾರೆ. ಗ್ರಾಹಕರ ಹಿತಾಸಕ್ತಿ, ದೇಶದ ಆಹಾರ ಸ್ವಾವಲಂಬನೆ ಕಡೆಗಣಿಸಿ, ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆಯನ್ನೂ ನಡೆಸದೇ ರಾತ್ರೋರಾತ್ರಿ ಸುಗ್ರೀವಾಜ್ಞೆ ಹೊರಡಿಸಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ‘ ಎಂದರು.

’ಈಗಿರುವ 1966ರ ಎಪಿಎಂಸಿ ಕಾಯ್ದೆಯು ರೈತರ ಹಿತವನ್ನೇ ಪ್ರಧಾನವಾಗಿ ಹೊಂದಿದೆ. 1986ರಲ್ಲಿ ಇದಕ್ಕೆ ತಿದ್ದುಪಡಿ ತಂದು ಕಾಯ್ದೆಯನ್ನು ಮತ್ತ‌ಷ್ಟು ಬಲಿಷ್ಠಗೊಳಿಸಲಾಗಿತ್ತು. ಒಂದೊಮ್ಮೆ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ರೈತರ ಶೋಷಣೆ ಹೆಚ್ಚಲಿದೆ‘ ಎಂದು ಹೇಳಿದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ’ಯಥೇಚ್ಛವಾಗಿ ದಾಸ್ತಾನು ಇರುವ ಆಹಾರ ಪದಾರ್ಥಗಳನ್ನು ಪ್ರತಿ ತಿಂಗಳಿಗೆ ಪ್ರತಿ ವ್ಯಕ್ತಿಗೆ 15 ಕೆ.ಜಿ.ಯಂತೆ ವಿತರಣೆ ಮಾಡಬೇಕು. ಕೇರಳ ಮಾದರಿಯಲ್ಲಿ ದಿನಸಿ ಸಾಮಗ್ರಿ ವಿತರಿಸಬೇಕು‘ ಎಂದು ಒತ್ತಾಯಿಸಿದರು.

’ರೈತರು, ಕೃಷಿ ಕೂಲಿಕಾರರು, ಕಸಬುದಾರರು, ಸ್ತ್ರೀಶಕ್ತಿ ಸಂಘಗಳ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ವಸೂಲಾತಿ ನಿಲ್ಲಿಸಬೇಕು. ಹೊಸ ಕೃಷಿ ಸಾಲ ವಿತರಿಸಬೇಕು. ಇಂಧನ ಬೆಲೆ ಇಳಿಸಬೇಕು. ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕು‘ ಎಂದು ತಿಳಿಸಿದರು.

’ರೈತರು, ಕೃಷಿ ಕೂಲಿಕಾರರು, ಕಸಬುದಾರರ ಕುಟುಂಬಕ್ಕೆ ಲಾಕ್‌ಡೌನ್‌ ಅವಧಿಯಲ್ಲಿ ₹10 ಸಾವಿರ ನೆರವು ನೀಡಬೇಕು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋನೆಯ ನೆರವನ್ನು ₹18 ಸಾವಿರಕ್ಕೆ ಹೆಚ್ಚಿಸಬೇಕು. ನರೇಗಾ ಕೆಲಸದ ದಿನಗಳ ಮಿತಿ ತೆಗೆಯಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ನೀಡಬೇಕು‘ ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಾರ್ಯಕರ್ತರು ಎ.ಟಿ.ರಾಮಕೃಷ್ಣಪ್ಪ, ಎ.ಎಂ.ನಾಗೇಶ್‌, ಕೆ.ಆರ್.ಮಂಜುಳಾ, ಸುರೇಶ್, ಸಂತೋಷ್, ಉಮಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.