ADVERTISEMENT

‘ಒಳಮೀಸಲಾತಿ ಹೋರಾಟಕ್ಕೆ ಸಿಕ್ಕ ಜಯ’: ಸಚಿವ ಕೆ.ಎಚ್. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 5:30 IST
Last Updated 27 ಆಗಸ್ಟ್ 2025, 5:30 IST
ಶಿಡ್ಲಘಟ್ಟ ತಾಲ್ಲೂಕು ಕಂಬದಹಳ್ಳಿಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕೋಲಾರ, ದೇವನಹಳ್ಳಿ ಸೇರಿದಂತೆ ಹಲವು ಕಡೆಯಿಂದ ಬಂದಿದ್ದ ದಲಿತ ಸಂಘಟನೆಗಳ ಮುಖಂಡರು ಅಭಿನಂದಿಸಿದರು
ಶಿಡ್ಲಘಟ್ಟ ತಾಲ್ಲೂಕು ಕಂಬದಹಳ್ಳಿಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕೋಲಾರ, ದೇವನಹಳ್ಳಿ ಸೇರಿದಂತೆ ಹಲವು ಕಡೆಯಿಂದ ಬಂದಿದ್ದ ದಲಿತ ಸಂಘಟನೆಗಳ ಮುಖಂಡರು ಅಭಿನಂದಿಸಿದರು   

ಶಿಡ್ಲಘಟ್ಟ: ಸುದೀರ್ಘ 35–40 ವರ್ಷಗಳ ಹೋರಾಟದ ಫಲವಾಗಿ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಜನರಿಗೆ ಒಳಮೀಸಲಾತಿ ಸೌಲಭ್ಯ ದೊರೆತಿದೆ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುವುದಾಗಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು. 

ತಾಲ್ಲೂಕಿನ ಕಂಬದಹಳ್ಳಿಯಲ್ಲಿ ದಲಿತ ಸಂಘಟನೆಗಳ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಒಳಮೀಸಲಾತಿ ಕುರಿತು ವರದಿ ಸಲ್ಲಿಸಿದ ನ್ಯಾಯಮೂರ್ತಿ ನಾಗಮನೋಹನ್ ದಾಸ್ ಅವರ ಕಾರ್ಯವು ಅಭಿನಂದನಾರ್ಹ’ ಎಂದು ಕೊಂಡಾಡಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಒಮ್ಮತದಿಂದ ಒಳಮೀಸಲಾತಿಯನ್ನು ಬೆಂಬಲಿಸಿದ್ದಾರೆ. ಇದರಿಂದ ಅಸಂಖ್ಯಾತ ದಲಿತ ಸಮುದಾಯಗಳಿಗೆ ಅನುಕೂಲವಾಗಲಿದೆ ಎಂದರು. 

ADVERTISEMENT

ಅಲೆಮಾರಿ ಸಮುದಾಯದವನ್ನು ‘ಸಿ’ ಗುಂಪಿಗೆ ಸೇರಿಸಿದ ಬಗ್ಗೆ ಆ ಸಮುದಾಯದವರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸಮುದಾಯದ ಮುಖಂಡರನ್ನು ಕರೆಸಿ, ಮುಖ್ಯಮಂತ್ರಿ ಚರ್ಚಿಸಿದ್ದಾರೆ. ಮಸೂದೆಯಲ್ಲಿ ಅಗತ್ಯವಿರುವ ಮಾರ್ಪಾಡು ಮಾಡಿ, ಕಾನೂನುಬದ್ಧವಾಗಿ ಪರಿಶೀಲಿಸಿ, ನ್ಯಾಯ ಕೊಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹೇಳಿದರು. 

ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚನೆಗೆ ಸರ್ಕಾರ ತೀರ್ಮಾನಿಸಿದ್ದು, ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ವಿಷಯ ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆಗಳನ್ನು ಆಯೋಗದಿಂದಲೇ ಬಗೆಹರಿಸಿಕೊಳ್ಳಬಹುದು. ಸಂವಿಧಾನಬದ್ಧವಾಗಿ ಸಿಕ್ಕಿರುವ ಮೀಸಲಾತಿಯನ್ನು ನಾವು ನಮ್ಮ ಏಳಿಗೆ ಮತ್ತು ಪ್ರಗತಿಗಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು. 

ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, ಇದು ನನಗೆ ಕೇಳಿಸಿಕೊಂಡಿಲ್ಲ. ಆ ವಿಡಿಯೊವನ್ನೂ ನಾನು ನೋಡಿಲ್ಲ. ನೋಡದೆ ಮತ್ತು ಕೇಳದೆ ಆ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳದೆ, ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ನುಣುಚಿಕೊಂಡರು. 

ಶಿಡ್ಲಘಟ್ಟದಲ್ಲಿ ರೇಷ್ಮೆಗೂಡು ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಿ, ಭೂಮಿಪೂಜೆ ನೆರವೇರಿಸಲಾಗುವುದು. ಕ್ಷೇತ್ರದಲ್ಲಿ ಕಾಂಗ್ರೆಸ್ ಬಣಗಳ ನಡುವಿನ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. 

ದೇವನಹಳ್ಳಿ, ಶಿಡ್ಲಘಟ್ಟ, ಕೋಲಾರ ಸೇರಿದಂತೆ ವಿವಿಧ ತಾಲ್ಲೂಕುಗಳ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.