ಚಿಂತಾಮಣಿ: ರಾಜ್ಯ ಸರ್ಕಾರ ಹಂತ ಹಂತವಾಗಿ ಹೋಬಳಿಗೊಂದು ಸುಸಜ್ಜಿತ ವಸತಿ ಶಾಲೆ ಮತ್ತು ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ತಾಲ್ಲೂಕಿನ ಕೆ.ರಾಗುಟ್ಟಹಳ್ಳಿ ಗ್ರಾಮದಲ್ಲಿರುವ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಪಿಯುಸಿ ತರಗತಿ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಎಲ್ಲ ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ ಆರಂಭಿಸಲಾಗುವುದು. ಅಗತ್ಯವಾದ ತರಗತಿ ಕೊಠಡಿ ಮತ್ತಿತರ ಸೌಲಭ್ಯ ಒದಗಿಸಲಾಗುವುದು. ಇದರ ಜತೆಗೆ ಹೋಬಳಿಗೊಂದು ಕೆಪಿಎಸ್ ಶಾಲೆಯನ್ನು ತೆರೆಯುವ ಚಿಂತನೆ ಇದೆ. ಈ ವರ್ಷ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸುವ ಚಿಂತನೆ ಇದೆ. ಕೆಪಿಎಸ್ ಶಾಲೆ ಆರಂಭಿಸಬೇಕಾದರೆ ಕನಿಷ್ಠ 300 ವಿದ್ಯಾರ್ಥಿಗಳಿರಬೇಕು ಎಂದರು.
ಕೆಪಿಎಸ್ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲಿದೆ. ಎಲ್‌ಕೆಜಿ, ಯುಕೆಜಿಯಿಂದ ಪಿಯುಸಿವರೆಗೂ ಒಂದೇ ಸೂರಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ವಿಪರ್ಯಾಸ ಎಂದರೆ ಕೆಪಿಎಸ್ ಶಾಲೆಗಳನ್ನು ತೆರೆಯಲು ಅಗತ್ಯವಾದ ವಿದ್ಯಾರ್ಥಿಗಳ ಸಂಖ್ಯೆ ದೊರೆಯುತ್ತಿಲ್ಲ. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 2-3 ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲು ಚಂತನೆ ಇದೆ. ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಾತ್ರ 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದರು.
ಸರ್ಕಾರದ ನೀತಿಯನ್ನು ಸಡಿಲಗೊಳಿಸಿ ಕನಿಷ್ಠ 250ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಕಡೆ ಕೆಪಿಎಸ್ ಶಾಲೆ ತೆರೆಯಲು ಪ್ರಯತ್ನಿಸುತ್ತೇನೆ. ತಾಲ್ಲೂಕಿನ ಯಗವಕೋಟೆಯಲ್ಲಿ 230, ಬಟ್ಲಹಳ್ಳಿಯಲ್ಲಿ 250 ವಿದ್ಯಾರ್ಥಿಗಳಿದ್ದಾರೆ. ಬಟ್ಲಹಳ್ಳಿಯಲ್ಲಿ ಪಿಯುಸಿ ಕಾಲೇಜು ಇದೆ. ಯಗವಕೋಟೆಯಲ್ಲಿ ಕೆಪಿಎಸ್ ಶಾಲೆ ಪ್ರಾರಂಭಿಸಲು ಆದ್ಯತೆ ನೀಡಲಾಗುವುದು ಎಂದರು.
ಹೋಬಳಿಗೊಂದು ವಸತಿ ಶಾಲೆ: ಅಂಬಾಜಿದುರ್ಗ ಹೋಬಳಿಯ ಕೆ.ರಾಗುಟ್ಟಹಳ್ಳಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಶಾಲೆ ಇದೆ. ಮುಂಗಾನಹಳ್ಳಿ ಹೋಬಳಿಯ ಕೋನಕುಂಟ್ಲು ಗ್ರಾಮದಲ್ಲಿ ₹22 ಕೋಟಿ ವೆಚ್ಚದಲ್ಲಿ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಾಮಗಾರಿ ಪ್ರಗತಿಯಲ್ಲಿದೆ. ಮುರುಗಮಲ್ಲ ಹೋಬಳಿಯ ಮುರುಗಮಲ್ಲ ಗ್ರಾಮದ ಬಳಿ ಪರಿಶಿಷ್ಟ ವರ್ಗ ವಸತಿ ಶಾಲೆಯನ್ನು ₹22 ಕೋಟಿ ವೆಚ್ಚದಲ್ಲಿ ನಿರ್ಮಿಸಲು 10 ಎಕರೆ ಜಮೀನನ್ನು ಮಂಜೂರು ಮಾಡಿಸಿದ್ದೇನೆ. ಕೈವಾರ ಹೋಬಳಿಯ ಕೈವಾರದಲ್ಲಿ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮಂಜೂರಾಗಿದೆ. ವಸತಿಶಾಲೆಗಳು ಈಗಾಗಲೇ ಆರಂಭವಾಗಿದ್ದು ತಾತ್ಕಾಲಿಕವಾಗಿ ಬೇರೆ ಕಡೆ ಕಾರ್ಯಾರಂಭ ಮಾಡಿವೆ ಎಂದರು.
ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದೆ. ವಸತಿ ಶಾಲೆಗಳಲ್ಲಿ ಸ್ಥಳೀಯ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಶೇ 70 ಹಾಗೂ ಇತರೆ ತಾಲ್ಲೂಕುಗಳಿಗೆ ಶೇ 30 ಮೀಸಲಾತಿ ನಿಗದಿಪಡಿಸಲಾಗಿದೆ. ವಸತಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಮತ್ತಿತರ ಸೌಲಭ್ಯವನ್ನು ಒದಗಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.
ಶಿಕ್ಷಕರಾದ ಸಚಿವ: ದಂತವೈದ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಸಚಿವರು ಕಿತ್ತೂರು ರಾಣಿ ಚನ್ನಮ್ಮ ಶಾಲೆಯಲ್ಲಿ ತರಗತಿಯಲ್ಲಿ ಶಿಕ್ಷಕರಾಗಿದ್ದರು. ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮುಂದಿನ ಭವಿಷ್ಯದ ಕನಸುಗಳ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ವೈದ್ಯ, ಎಂಜಿನಿಯರ್, ಕೃಷಿ ವಿಜ್ಞಾನ ಮತ್ತಿತರ ಕೋರ್ಸ್‌ಗಳಲ್ಲಿ ಕಲಿಯುವ ಆಸಕ್ತಿಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆಂಗ್ಲ ಭಾಷೆಯಲ್ಲಿ ಹೆಚ್ಚಿನ ಜ್ಞಾನ, ಹಿಡಿತ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ತಹಶೀಲ್ದಾರ್ ಸುದರ್ಶನ ಯಾದವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.