ADVERTISEMENT

ಕಡತ ಪಡೆಯಲು ತಪ್ಪದ ಕಿರಿಕಿರಿ: ಕಂದಾಯ ಇಲಾಖೆಯಲ್ಲಿ 32 ಕಾಯಂ ಖಾಲಿ ಹುದ್ದೆ

ಪಿ.ಎಸ್.ರಾಜೇಶ್
Published 24 ಸೆಪ್ಟೆಂಬರ್ 2025, 7:06 IST
Last Updated 24 ಸೆಪ್ಟೆಂಬರ್ 2025, 7:06 IST
ಬಾಗೇಪಲ್ಲಿ ತಾಲ್ಲೂಕಿನ ಮಿನಿವಿಧಾನಸೌಧ
ಬಾಗೇಪಲ್ಲಿ ತಾಲ್ಲೂಕಿನ ಮಿನಿವಿಧಾನಸೌಧ   

ಬಾಗೇಪಲ್ಲಿ: ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ 77 ಕಾಯಂ ಮಂಜೂರಾದ ಹುದ್ದೆಗಳ ಪೈಕಿ 45 ಹುದ್ದೆ ಭರ್ತಿಯಾಗಿದೆ. ಉಳಿದಂತೆ 32 ಹುದ್ದೆ ಖಾಲಿ ಇವೆ.

ತಾಲ್ಲೂಕು ಕಚೇರಿ, ಅಟಲ್ ಜನಸ್ನೇಹಿ ಕೇಂದ್ರ (ನಾಡಕಚೇರಿ)ಗಳಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿ ಕೊರತೆಯಿಂದ ಕೃಷಿಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಕಡತಗಳಿಗಾಗಿ ಪರದಾಡುವಂತೆ ಆಗಿದೆ.

ತಾಲ್ಲೂಕಿನಲ್ಲಿ ಗೂಳೂರು, ಪಾತಪಾಳ್ಯ, ಮಿಟ್ಟೇಮರಿ, ಕಸಬಾ ಹೋಬಳಿ ಕೇಂದ್ರಗಳು ಇವೆ. 250ಕ್ಕೂ ಹೆಚ್ಚು ಗ್ರಾಮಗಳ ಪೈಕಿ, 40ಕ್ಕೂ ಹೆಚ್ಚು ತಾಂಡಗಳು ಇವೆ. ಬಹುತೇಕವಾಗಿ ಆಂಧ್ರಪ್ರದೇಶದ ಗಡಿಯ ಅಂಚಿನಲ್ಲಿ ಗ್ರಾಮ, ತಾಂಡಗಳಲ್ಲಿ ಕೃಷಿಕೂಲಿಕಾರ್ಮಿಕರು ವಾಸವಾಗಿದ್ದಾರೆ.

ADVERTISEMENT

ಕಂದಾಯ ಇಲಾಖೆಗೆ ಸೇರಿದ ತಾಲ್ಲೂಕು ಕಚೇರಿ, ನಾಡಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದಲ್ಲಿ 32 ಹುದ್ದೆ ಖಾಲಿ ಇವೆ. ಗ್ರೇಡ್ ತಹಶೀಲ್ದಾರ್ 2 ಹುದ್ದೆಗೆ ಕಳೆದ ಅನೇಕ ತಿಂಗಳಿಂದ ಹುದ್ದೆ ಭರ್ತಿ ಆಗಿಲ್ಲ. ಗುಡಿಬಂಡೆ ತಾಲ್ಲೂಕಿನ ಅಧಿಕಾರಿಯೊಬ್ಬರು ತಾಲ್ಲೂಕಿನ ಕಚೇರಿಯಲ್ಲಿ ಪ್ರಭಾರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.

ಉಳಿದಂತೆ 3 ಉಪ ತಹಶೀಲ್ದಾರ್ ಹುದ್ದೆಗಳ ಪೈಕಿ ಒಬ್ಬರು ಭರ್ತಿಯಾಗಿದ್ದು, ಉಳಿದ ಎರಡು ಹುದ್ದೆ ಖಾಲಿ ಇವೆ. ಶಿರಸ್ತೆದಾರ್ 1, ದ್ವಿತೀಯ ದರ್ಜೆ ಸಹಾಯಕ 1, ಶೀಘ್ರಲಿಪಿಗಾರರು 3, ಗ್ರಾಮಲೆಕ್ಕಿಗರು 13, ಗ್ರಾಮಲೆಕ್ಕಿಗರು (ಭೂಮಿಕೇಂದ್ರ) 3, ವಾಹನ ಚಾಲಕ 1, ಅಟೆಂಡರ್ 1 ಉಳಿದಂತೆ 9 ಮಂಜೂರಾದ ಡಿ ಗ್ರೂಪ್ ನೌಕರರ ಪೈಕಿ ಎರಡು ಭರ್ತಿಯಾಗಿದೆ. ಉಳಿದ 7 ಮಂದಿ ಡಿ ಗ್ರೂಪ್ ನೌಕರರ ಹುದ್ದೆ ಖಾಲಿ ಇವೆ.

ವಿದ್ಯಾಭ್ಯಾಸಕ್ಕೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವಾಸಸ್ಥಳ ಪತ್ರ, ಭೂ ಹಿಡುವಳಿದಾರರ ಪತ್ರ, ಜನನ ಮತ್ತು ಮರಣ ಪ್ರಮಾಣ ಪತ್ರ, ಕೃಷಿ ಕಾರ್ಮಿಕ, ಸಾಲ ತೀರಿಸುವ ಶಕ್ತಿ, ಜನಸಂಖ್ಯಾ, ಮೃತರ ಕುಟುಂಬ ಸದಸ್ಯರ, ಅಧಿಕೃತ ವ್ಯವಸಾಯಗಾರರಿಗೆ, ಸಣ್ಣ, ಅತಿಸಣ್ಣ ರೈತರಿಗೆ ನೀಡುವ ಜಮೀನು ರಹಿತರ, ವಿಧವೆ, ಜೀವಂತ ಸದಸ್ಯರ ವಂಶವೃಕ್ಷ, ವ್ಯವಸಾಯಗಾರರ ಪತ್ರ, ವಿವಿಧ ಸರ್ಕಾರಿ ಪ್ರಮಾಣ ಪತ್ರಗಳನ್ನು ಕಂದಾಯ ಇಲಾಖೆಯಿಂದ ಪಡೆಯಲು ಸಮಸ್ಯೆಯಾಗುತ್ತಿದೆ.

ಪಹಣಿ, ಮ್ಯುಟೇಷನ್, ಪ್ರಕೃತಿ ವಿಕೋಪ, ಮಳೆ ಮಾಪನ ನಿರ್ವಹಣೆ ಅಧಿಕಾರ ಆಯಾಯ ಉಪ ತಹಶೀಲ್ದಾರ್ ವ್ಯಾಪ್ತಿಯಲ್ಲಿ ಇವೆ. ಕಂದಾಯ ಇಲಾಖೆ ಹಾಗೂ ನಾಡಕಚೇರಿಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರೇ ಹೆಚ್ಚಾಗಿ ಇದ್ದಾರೆ. ಕೆಲ ಅಧಿಕಾರಿ, ಸಿಬ್ಬಂದಿಗೆ ಹೆಚ್ಚುವರಿ ಕೆಲಸ ನೀಡಲಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಹೆಚ್ಚುವರಿಯಾಗಿ ಇರುವುದರಿಂದ ಸಕಾಲಕ್ಕೆ ಕಡತಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ.

ಸಕಾಲದಲ್ಲಿ ಕಡತ ಸಿಗದೇ ಕೃಷಿಕೂಲಿಕಾರ್ಮಿಕರು ಕೃಷಿ ಕೆಲಸ ಬಿಟ್ಟು ಕಾಯುತ್ತಿದ್ದಾರೆ. ಅಧಿಕಾರಿಗೆ, ಸಿಬ್ಬಂದಿಗೆ ಕೆಲಸ ನಿರ್ವಹಿಸಲು ಹೆಚ್ಚುವರಿ ಕೊಠಡಿ ಇಲ್ಲ. ತಾಲ್ಲೂಕು ಕಚೇರಿಯಲ್ಲಿಯೇ ಅಧಿಕಾರಿ, ಸಿಬ್ಬಂದಿ ಸಿಗಬೇಕು. ಖಾಲಿ ಇರುವ ಹುದ್ದೆ ಒಂದು ಕಡೆಯಾದರೆ, ಈಗ ಕರ್ತವ್ಯ ನಿರ್ವಹಿಸುವವರು ಸಿಗುವುದಿಲ್ಲ ಎಂದು ರೈತ ವೆಂಕಟರೆಡ್ಡಿ ತಿಳಿಸಿದರು.

ಜನಪರ ಸರ್ಕಾರ ಮತ್ತು ಸರ್ಕಾರಿ ಕೆಲಸಗಳನ್ನು ತ್ವರಿತವಾಗಿ ಮಾಡುತ್ತೇವೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಭಾಷಣಗಳಲ್ಲಿ ಹೇಳುತ್ತಾರೆ. ಆದರೆ ವಾಸ್ತವವಾಗಿ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಗುತ್ತಿಗೆ, ಹೊರಗುತ್ತಿಗೆ ನೌಕರರು ಇದ್ದರೂ, ಜನರಿಗೆ ಸರ್ಕಾರಿ ಕೆಲಸಗಳು ವಿಳಂಬ ಆಗುತ್ತಿವೆ. ಸರ್ಕಾರ ಕೂಡಲೇ ಕಂದಾಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ಜಿ.ಕೃಷ್ಣಪ್ಪ ಒತ್ತಾಯಿಸಿದರು.

ನಾಡಕಚೇರಿಯಲ್ಲಿ ಕಡತ ಸಿಗಲು ಹೊರಗುತ್ತಿಗೆ ನೌಕರರಿಂದ ಕೆಲಸ ಮಾಡಿಸಲಾಗುತ್ತಿದೆ. ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಲಾಗುತ್ತಿದೆ. ಜನರು ಅಹವಾಲು ಸಲ್ಲಿಸಿ, ಕಡತ ಪಡೆಯಬಹುದು ಎಂದು ತಹಶೀಲ್ದಾರ್ ಮನೀಷಾ ಎನ್.ಪತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.