ADVERTISEMENT

ಯಾವಾಗ ಕಾಲ ಕೂಡುತ್ತದೆಯೋ ಕಾಮಗಾರಿಗೆ?

ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಹೈರಾಣಾಗುತ್ತಿದ್ದಾರೆ ಸವಾರರು

ಡಿ.ಎಂ.ಕುರ್ಕೆ ಪ್ರಶಾಂತ
Published 18 ಆಗಸ್ಟ್ 2021, 3:23 IST
Last Updated 18 ಆಗಸ್ಟ್ 2021, 3:23 IST
ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ನಡುವಿನ ರಸ್ತೆಯಲ್ಲಿನ ಅವ್ಯವಸ್ಥೆ
ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ನಡುವಿನ ರಸ್ತೆಯಲ್ಲಿನ ಅವ್ಯವಸ್ಥೆ   

ಚಿಕ್ಕಬಳ್ಳಾಪುರ: ಈ ರಸ್ತೆ ಯಾವಾಗ ಸರಿ ಹೋಗುತ್ತದೆಯೋ?–ಇದುಗೌರಿಬಿದನೂರು ರಸ್ತೆಯಲ್ಲಿ ಕಣಿವೆ ಪ್ರದೇಶದಲ್ಲಿ ಸಾಗುವ ವಾಹನ ಸವಾರರ ಬೇಸರದ ನುಡಿ.

ಚಿಂತಾಮಣಿಯಿಂದ ಆಂಧ್ರಪ್ರದೇಶದ ಹಿಂದೂಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234 ಕಾಮಗಾರಿ ಗೌರಿಬಿದನೂರು ರಸ್ತೆಯಲ್ಲಿ ಕಣಿವೆ ಪ್ರದೇಶದ ಆಸುಪಾಸಿನಲ್ಲಿ ವಾಹನ ಸವಾರರಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ.

ಕಾಮಗಾರಿ ಆರಂಭಗೊಂಡ ಐದಾರು ವರ್ಷಗಳಲ್ಲಿ ಹಲವು ಗುತ್ತಿಗೆದಾರರು ಬದಲಾದರೂ ಈವರೆಗೆ ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಹಲವು ವರದಿಗಳು ಸಹ ಪ್ರಕಟವಾಗಿವೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಮೌನವಾಗಿದ್ದಾರೆ.

ADVERTISEMENT

ಗೌರಿಬಿದನೂರು ಭಾಗದಿಂದ ಚಿಕ್ಕಬಳ್ಳಾಪುರಕ್ಕೆ ಪ್ರವೇಶಿಸುವ ಈ ದಾರಿಯಲ್ಲಿ ಜಲ್ಲಿಕಲ್ಲುಗಳು ರಸ್ತೆಯಲ್ಲಿದ್ದಿವೆ. ವಾಹನ ಸವಾರರಿಗೆ ದೂಳು ಅಡರುತ್ತದೆ. ಲಾರಿಯೊ, ಬಸೊ ಮುಂದೆ ಹೋದರೆ ದ್ವಿಚಕ್ರ ವಾಹನ ಸವಾರರು ಕ್ಷಣ ಕಾಲ ನಿಲ್ಲಬೇಕು. ಇಲ್ಲವೆ ಮೂಗು ಮುಚ್ಚಿಕೊಳ್ಳಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ಕಾಮಗಾರಿಯ ಬಗ್ಗೆ ಆಗಾಗ್ಗೆ ಭರವಸೆಯ ಮಾತುಗಳನ್ನಾಡುತ್ತಾರೆ. ಆದರೆ ಕಾಮಗಾರಿ ಮಾತ್ರ ಪೂರ್ಣವಾಗುತ್ತಲೇ ಇಲ್ಲ.

ಕಣಿವೆ ಪ್ರದೇಶದ ಬಳಿ ವಿಸ್ತರಣೆ ಮತ್ತು ಡಾಂಬರೀಕರಣಕ್ಕಾಗಿ ರಸ್ತೆಗೆ ಜಲ್ಲಿಕಲ್ಲು ಸುರಿದು ಹಾಗೇ ಬಿಟ್ಟಿರುವುದು ಸವಾರರಿಗೆ ತೀವ್ರ ಸಂಕಷ್ಟ ನೀಡುತ್ತಿದೆ. ಜಲ್ಲಿ ಕಲ್ಲು ಸುರಿದ ಜಾಗದಲ್ಲಿ ದೊಡ್ಡ ವಾಹನಗಳು ಸಂಚರಿಸಿದಾಗಲೆಲ್ಲ ಭಾರಿ ಪ್ರಮಾಣದಲ್ಲಿ ಮೇಲೇಳುವ ದೂಳು ಸವಾರರನ್ನು ಅಪಾಯಕ್ಕೆ ಒಡ್ಡುತ್ತಿದೆ.

ಪ್ರಸ್ತುತ ಈ ರಸ್ತೆಯಲ್ಲಿ ಪಾದಚಾರಿಗಳು, ಸವಾರರು ದೀಳಿನ ಮಜ್ಜನದಿಂದ ಬೇಸತ್ತು ಹೋಗುತ್ತಿದ್ದಾರೆ. ವಾಹನಗಳು ಸಂಚರಿಸಿದಾಗ, ಜೋರಾಗಿ ಗಾಳಿ ಬಿಸಿದಾಗ ಜನರು ಕಣ್ಣಲ್ಲಿ ದೂಳು ತುಂಬಿಸಿಕೊಂಡು ಸಂಬಂಧಿಸಿದವರಿಗೆ ಹಿಡಿಶಾಪ ಹಾಕುತ್ತ ಸಂಚರಿಸುವ ದೃಶ್ಯಗಳು ಬೇಸರ ಹುಟ್ಟಿಸುತ್ತವೆ.

ಹದಗೆಟ್ಟ ರಸ್ತೆ, ಅರೆಬರೆ ಕಾಮಗಾರಿ, ಮರೆತು ಹೋದ ನಿರ್ವಹಣಾ ಕಾರ್ಯಗಳಿಂದಾಗಿ ಸವಾರರು ಹೆದ್ದಾರಿ ಎನಿಸಿಕೊಂಡಿರುವ ಅಂದಗೆಟ್ಟ ರಸ್ತೆಯಲ್ಲಿ ದೂಳಿನಲ್ಲಿ ಮಿಂದೆದ್ದು ಗೋಳಾಡುವ ಪರಿಸ್ಥಿತಿ ದಿನೇ ದಿನೇ ಹೆಚ್ಚುತ್ತಿದೆ. ದೂಳಿನಿಂದ ಆವೃತ್ತವಾಗಿರುವ ರಸ್ತೆ ಜನ ಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂಬ ದೂರುಗಳು ಈ ಮಾರ್ಗದಲ್ಲಿ ನಿತ್ಯ ಸಂಚರಿಸುವವರಿಂದ ಕೇಳಿ ಬರುತ್ತಿದೆ.

ಆಮೆಗತಿಯಲ್ಲಿ ತೆವಳುತ್ತ ಸಾಗುತ್ತಿರುವ ಹೆದ್ದಾರಿ ಕಾಮಗಾರಿ ಈಗಾಗಲೇ ಸೃಷ್ಟಿಸಿದ ಅನೇಕ ತೊಂದರೆಗಳಿಂದ ಹೈರಾಣಾಗಿದ್ದ ಜನರು ಇದೀಗ ದೂಳಿನಿಂದ ರಕ್ಷಣೆ ಪಡೆಯಲು ಹರಸಾಹಸ ಪಡುತ್ತ, ಸಾಕಪ್ಪಾ, ಸಾಕು ದೂಳಿನ ಸಹವಾಸ ಎಂದು ಶಪಿಸುತ್ತಿದ್ದಾರೆ. ಒಟ್ಟಾರೆ ಧೂಳು ಇನ್ನಿಲ್ಲದ ಅವಾಂತರ ಸೃಷ್ಟಿಸುತ್ತಿದ್ದು, ಕಾಮಗಾರಿ ಯಾವಾಗ ಪೂರ್ಣಗೊಂಡು, ಧೂಳಿನಿಂದ ಮುಕ್ತಿ ದೊರೆಯುತ್ತದೆ ಎಂದು ಜನರು ಎದುರು ನೋಡುತ್ತಿದ್ದಾರೆ.

ಮಳೆಗಾಲದಲ್ಲಿಯಂತೂ ರಸ್ತೆ ಮತ್ತಷ್ಟು ಅಧ್ವಾನಗೊಳ್ಳುತ್ತದೆ. ಗುಂಡಿಗಳಲ್ಲಿ ನೀರು ತುಂಬಿ ವಾಹನಗಳು ಸಾಗುವುದೇ ದುಸ್ತರವಾಗುತ್ತದೆ. ರಸ್ತೆ ಅವ್ಯವಸ್ಥೆಯಿಂದ ವಾಹನಗಳು ಸಹ ಅಡ್ಡಾದಿಡ್ಡಿಯಾಗಿ
ಚಲಾಯಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.