ADVERTISEMENT

ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಿಲ್ಲ: ಮಾಜಿ ಸಂಸದ ಎಸ್.ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:19 IST
Last Updated 20 ಅಕ್ಟೋಬರ್ 2025, 4:19 IST
ಚಿಂತಾಮಣಿಯಲ್ಲಿ ಆರ್.ಎಸ್.ಎಸ್ ನಡೆಸಿದ ಪಥಸಂಚಲನೆ
ಚಿಂತಾಮಣಿಯಲ್ಲಿ ಆರ್.ಎಸ್.ಎಸ್ ನಡೆಸಿದ ಪಥಸಂಚಲನೆ   

ಚಿಂತಾಮಣಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯ ಸರ್ಕಾರ ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸಿ ಸಮುದಾಯಗಳ ನಡುವೆ ಕಂದಕ ಸೃಷ್ಟಿಸುತ್ತಿದೆ. ಉತ್ತಮ ಆಡಳಿತ, ಅಭಿವೃದ್ಧಿ ಕಡೆ ಗಮನಹರಿಸದೆ ಕ್ಷುಲ್ಲಕ ತಗಾದೆ ಹುಟ್ಟುಹಾಕುತ್ತಿದೆ. ಬಕ್ರೀದ್, ಈದ್ ಮಿಲಾದ್ ಸಂದರ್ಭಗಳಲ್ಲಿ ಮುಸ್ಲಿಮರು ಸರ್ಕಾರಿ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಪ್ರಾರ್ಥನೆ, ಮೆರವಣಿಗೆ ಮಾಡುತ್ತಾರೆ. ಆರ್‌ಎಸ್‌ಎಸ್ ಎಂದಾದರೂ ಅದರ ಬಗ್ಗೆ ಆರೋಪ ಮಾಡಿದೆಯೇ? ಅದನ್ನು ನಿಷೇಧ ಮಾಡಿ ಜನ ಒತ್ತಾಯಿಸಲು ಸರ್ಕಾರವೇ ಮಾರ್ಗ ತೋರಿದೆ’ ಎಂದರು.

ADVERTISEMENT

ಆರ್‌ಎಸ್‌ಎಸ್ 100 ವರ್ಷಗಳ ಸ್ಮರಣೆಗಾಗಿ ಪಥಸಂಚಲನ ನಡೆಸುತ್ತಿದೆ. ಸಚಿವ ಪ್ರಿಯಾಂಕ ಖರ್ಗೆ, ಸರ್ಕಾರ ಈ ವಿಷಯ ಪ್ರಸ್ತಾಪ ಮಾಡದಿದ್ದರೆ ಇಷ್ಟೊಂದು ಪ್ರಚಾರ ದೊರೆಯುತ್ತಿರಲಿಲ್ಲ. 100 ವರ್ಷಗಳ ಸಂಭ್ರಮದಲ್ಲಿ ಸಾವಿರಾರು ಆರ್‌ಎಸ್‌ಎಸ್ ಸ್ವಯಂಸೇವಕರು, ದೇಶಪ್ರೇಮಿಗಳು ಭಾಗವಹಿಸಿದ್ದು ಸಂಘಟನೆಯ ಬಲವನ್ನು ಪ್ರಚುರಪಡಿಸಿದಂತಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂತೋಷ್‌ ಲಾಡ್, ಪ್ರಿಯಾಂಕ ಖರ್ಗೆ, ವಿಧಾನ ಪರಿಷದ್ ಸದಸ್ಯ ಹರಿಪ್ರಸಾದ್ ಮತ್ತಿತರರು ಸಂಘದ ಕುರಿತು ಲಘುವಾಗಿ ಮಾತನಾಡುವುದು, ಆಪಾದನೆ ಮಾಡುವುದು, ದೇಶದ್ರೋಹಿಗಳು ಎಂದು ಕರೆಯುವುದು ಖಂಡನೀಯ. ಸಂಘದ ದೇಶಪ್ರೇಮವನ್ನು ಹಿಯಾಳಿಸುವವರು ಪಾಕಿಸ್ತಾನದ ಏಜೆಂಟ್‌ಗಳು ಎಂದು ಜರಿದರು.

ಪಾಲಿಟೆಕ್ನಿಕ್ ಆವರಣದಿಂದ ಗಜಾನನ ವೃತ್ತ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತ, ಬೆಂಗಳೂರು ವೃತ್ತ, ತಾಲ್ಲೂಕು ಕಚೇರಿ ವೃತ್ತದಿಂದ ಪಥಸಂಚಲನ ಸಾಗಿತು. 
ಬಿಜೆಪಿ ಮುಖಂಡ ವೇಣುಗೋಪಾಲ್, ಸತ್ಯನಾರಾಯಣ ಮಹೇಶ್, ನಾ.ಶಂಕರ್, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.