ADVERTISEMENT

ಹಿಂದೂ ಸಮಾಜ ಪ್ರತಿಷ್ಠಾಪನೆ ಮಾಡಲೇಬೇಕು: ಕಲ್ಲಡ್ಕ ಪ್ರಭಾಕರ ಭಟ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 13:21 IST
Last Updated 19 ಜನವರಿ 2020, 13:21 IST
ಡಾ.ಪ್ರಭಾಕರ ಭಟ್ ಕಲ್ಲಡ್ಕ
ಡಾ.ಪ್ರಭಾಕರ ಭಟ್ ಕಲ್ಲಡ್ಕ   

ಚಿಕ್ಕಬಳ್ಳಾಪುರ: ‘ಹಿಂದೂ ಧರ್ಮವೆಂದರೆ ಅದೊಂದು ಕೋಮುವಾದ, ಸಂಕುಚಿತ, ಸಮಾಜ ವಿಭಜಕ ಎಂದು ಬ್ರಿಟಿಷರು ಹೇಳುತ್ತ ಬಂದ ಗಿಳಿಪಾಠವನ್ನೇ ಕಾಂಗ್ರೆಸ್‌ನವರು ಮುಂದುವರಿಸಿಕೊಂಡು ಬಂದ ಪರಿಣಾಮ, ಇವತ್ತು ಹಿಂದೂ ಎಂದು ಹೇಳಿಕೊಳ್ಳಲು ಹಿಂದೂ ಸಮಾಜಕ್ಕೆ ಧೈರ್ಯವಿಲ್ಲ. ಅದನ್ನು ಮತ್ತೊಮ್ಮೆ ಪ್ರತಿಷ್ಠಾಪಿಸುವ ಕೆಲಸ ನಾವು ಮಾಡಲೇಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೂ ಧರ್ಮ ಸಂಕುಚಿತ, ಅದು ದೇಶವನ್ನು ತುಂಡರಿಸುತ್ತದೆ ಎಂದು ಮಕ್ಕಳಿಗೆ ಬಾಲ್ಯದಿಂದಲೇ ಹೇಳುತ್ತ ಬರುತ್ತಿರುವುದರಿಂದ ಈಗ ಅನೇಕ ಸಮಸ್ಯೆಗಳನ್ನು ನೋಡಬೇಕಾಗಿ ಬಂದಿದೆ. ಭಾರತದಲ್ಲಿ ಬಹು ಹಿಂದಿನಿಂದಲೂ ಎಲ್ಲ ಧರ್ಮಿಯರಿಗೆ ನಾವು ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಆದ್ದರಿಂದ ನಮ್ಮದು ಸಂಕುಚಿತವಲ್ಲ, ಜಗತ್ತಿನ ಏಕಮೇವ ವಿಶಾಲ ಸಮಾಜ, ಧರ್ಮ, ಸಂಸ್ಕೃತಿ. ಅದರ ತಿಳುವಳಿಕೆ ಮತ್ತಷ್ಟು ಜನರಿಗೆ ಮೂಡಿಸುವ ಕೆಲಸವಾಗಬೇಕಿದೆ’ ಎಂದು ತಿಳಿಸಿದರು.

‘ದೇಶ ವಿಭಜನೆ ಸಂದರ್ಭದಲ್ಲೇ ಅಂಬೇಡ್ಕರ್‌ ಅವರು, ಇದೊಂದು ಮತೀಯ ಆಧಾರದಲ್ಲಿ ನಡೆದ ವಿಭಜನೆಯಾದ್ದರಿಂದ, ಪಾಕಿಸ್ತಾನದಲ್ಲಿರುವ ಹಿಂದೂಗಳನ್ನೆಲ್ಲ ಇಲ್ಲಿಗೆ ಬರಲು ಹೇಳಿ. ಇಲ್ಲಿರುವ ಮುಸಲ್ಮಾನರನ್ನು ಅಲ್ಲಿಗೆ ಕಳುಹಿಸಿ ಎಂದು ಹೇಳಿದರು. ಹಾಗೇ ಆಗಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಜಗತ್ತು ಕೂಡ ಶಾಂತವಾಗಿ ಇರುತ್ತಿತ್ತು. ಇವತ್ತು ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್‌ರು ಮತ್ತು ಕಮ್ಯೂನಿಸ್ಟರು ಒಂದು ರೀತಿಯಲ್ಲಿ ದೇಶ ವಿರೋಧಿ ವಿಚಾರ ಮಾಡುತ್ತ, ತಮ್ಮದೇ ಸಾಮ್ರಾಜ್ಯಗಳ ನಿರ್ಮಾಣ ಮಾಡಬೇಕು ಎನ್ನುವ ಹುನ್ನಾರದಲ್ಲಿದ್ದಾರೆ. ಆದ್ದರಿಂದ ನಮ್ಮ ಧರ್ಮದ ಜಾಗೃತಿ ಕಾರ್ಯ ನಡೆಯಬೇಕಿದೆ’ ಎಂದರು.

‘ದುರ್ದೈವ ನಮ್ಮ ಶಾಲೆಗಳಲ್ಲಿ ನಮ್ಮ ಧರ್ಮದ ಬಗ್ಗೆ ಹೇಳುವ ವ್ಯವಸ್ಥೆ ಇಲ್ಲ. ಆದರೆ, ಮಸೀದಿಯಲ್ಲಿ ಕುರಾನ್, ಚರ್ಚ್‌ಗಳಲ್ಲಿ ಬೈಬಲ್‌ ಕುರಿತು ಹೇಳಿಕೊಡುತ್ತಾರೆ. ನಮ್ಮಲ್ಲಿ ದುರ್ದೈವದಿಂದ ದೇವಾಲಯಗಳು, ಮಠಗಳು ಕೂಡ ಆ ಕೆಲಸ ಮಾಡುತ್ತಿಲ್ಲ. ಮಠ–ಮಂದಿರಗಳು, ದೇವಾಲಯಗಳು, ಸನ್ಯಾಸಿಗಳು ಈ ಕಾರ್ಯ ಮಾಡಬೇಕು. ಈ ಮೂವರು ನಾವೆಲ್ಲ ಹಿಂದೂಗಳು ಎಂದು ಹೇಳುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾಳೆ ಜಾತ್ಯತೀತ ಎಂದು ಹೇಳುತ್ತ ಹೋದರೆ ಸನ್ಯಾಸಿಗೆ ಗೌರವ ಕೊಡುವವರು ಯಾರು? ದೇವಸ್ಥಾನಗಳು, ಮಠಗಳ ಬಗ್ಗೆ ಭಕ್ತಿ ನಿರ್ಮಾಣ ಮಾಡುವವರು ಯಾರು’ ಎಂದು ಪ್ರಶ್ನಿಸಿದರು.

‘ಇಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್ನರು ಬೇರೆ ದೃಷ್ಟಿಯಿಂದ ಯೋಚನೆ ಮಾಡುತ್ತಿದ್ದಾರೆ. ಅದಕ್ಕಾಗಿಯೇ ನಾವು ಅವರಿಗೆ ಸರಿಯಾದ ಮುಸ್ಲಿಮ, ಕ್ರಿಶ್ಚಿಯನ್ನರಾಗಿ ಎಂದು ಹೇಳುತ್ತಿದ್ದೇವೆ. ಅವರು ಸರಿಯಾದರೆ ಶಾಂತಿ ನೆಲೆಸುತ್ತದೆ. ಏಸು, ಅಲ್ಲಾನನ್ನು ಆರಾಧಿಸಲು ನಮಗೆ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಇನ್ನೊಬ್ಬರನ್ನು ಮತಾಂತರ ಮಾಡಿದರೆ ಸ್ವರ್ಗದಲ್ಲಿ 76 ಹೆಣ್ಣು ಮಕ್ಕಳು, ಕುಡಿಯಲು ಮದ್ಯ ಸಿಗುತ್ತದೆ ಎಂಬ ಆ ಸಮಾಜಗಳನ್ನು ಹಾಳು ಮಾಡುವ ಮುಖಂಡರ ಹುಚ್ಚು ಮಾತುಗಳಿಂದ ಸಿಕ್ಕವರನ್ನೆಲ್ಲ ಮುಸ್ಲಿಮರು, ಕ್ರಿಶ್ಚಿಯನ್‌ರನ್ನಾಗಿ ಮತಾಂತರಿಸುವ ಕೆಲಸ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಈ ದೇಶದಲ್ಲಿ ಗೊಂದಲ ಸೃಷ್ಟಿಸಿ, ಮತ್ತೊಮ್ಮೆ ದೇಶ ವಿಭಜಿಸಬೇಕು ಎನ್ನುವುದೇ ಇವರ ಉದ್ದೇಶ. ಇವತ್ತು ದೇಶದಲ್ಲಿ ಜನರು ಕೇಂದ್ರ ಸರ್ಕಾರ, ಮೋದಿ, ಅಮಿತ್‌ ಶಾ ಅವರ ಪರವಾಗಿ ಜನ ಮಾತನಾಡುತ್ತಿದ್ದಾರೆ. ಆದ್ದರಿಂದ ಎಲ್ಲಿ ನಮ್ಮ ಸ್ಥಾನ ಹೋಗಿ ಬಿಡುತ್ತದೆ ಎಂಬ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಗಲಾಟೆ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸ್ವರೂಪ ಕಾಶ್ಮೀರದ ಮಾದರಿಯಲ್ಲಿತ್ತು. ಕಾಶ್ಮೀರದಲ್ಲಿ ತರಬೇತಿ ಪಡೆದು ಬಂದವರು ಗಲಭೆ ಎಬ್ಬಿಸಿದ್ದರು. ಪೊಲೀಸರ ದಿಟ್ಟ ಕ್ರಮದಿಂದಾಗಿ ಅಲ್ಲಿ ಕಾನೂನು ಸುವ್ಯವಸ್ಥೆ ತಹಬದಿಗೆ ಬಂತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.