ADVERTISEMENT

ಚಿಕ್ಕಬಳ್ಳಾಪುರದಲ್ಲಿ ‘ವಿಜಯ ದಶಮಿ ಪಥಸಂಚಲನ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 12:40 IST
Last Updated 5 ಅಕ್ಟೋಬರ್ 2019, 12:40 IST
ನಗರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ‘ವಿಜಯ ದಶಮಿ ಪಥಸಂಚಲನ’ ನಡೆಸಿದರು.
ನಗರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ‘ವಿಜಯ ದಶಮಿ ಪಥಸಂಚಲನ’ ನಡೆಸಿದರು.   

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ನಗರದಲ್ಲಿ ಶನಿವಾರ ‘ವಿಜಯ ದಶಮಿ ಪಥಸಂಚಲನ’ ನಡೆಸಿದರು.

ಗಣವೇಷ ಧರಿಸಿದ ನೂರಾರು ಕಾರ್ಯಕರ್ತರು ಮಧ್ಯಾಹ್ನ 2.30ರ ಸುಮಾರಿಗೆ ನಗರದ ಕೃಷ್ಣ ಚಿತ್ರಮಂದಿರ ರಸ್ತೆಯಲ್ಲಿರುವ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಪಥಸಂಚಲನ ಮೆರವಣಿಗೆ ಆರಂಭಿಸಿದರು. ಅಲ್ಲಿಂದ ಭುವನೇಶ್ವರಿ ವೃತ್ತ, ಗಂಗಮ್ಮ ಗುಡಿ ರಸ್ತೆ, ದೊಡ್ಡ ಭಜನೆ ಮನೆ ರಸ್ತೆ, ಸುಣ್ಣದ ಕಲ್ಲು ರಸ್ತೆ ಮೂಲಕ ಸಾಗಿದ ಪಥಸಂಚಲನ ಶಿಡ್ಲಘಟ್ಟ ರಸ್ತೆಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕ ವಿದ್ಯಾಸಂಸ್ಥೆ ಆವರಣ ತಲುಪಿತು.

ಪ್ರಮುಖ ಬೀದಿಗಳಲ್ಲಿ ಜನರು ದಾರಿಯುದ್ದಕ್ಕೂ ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದರು. ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ADVERTISEMENT

ವಿಶ್ವೇಶ್ವರಯ್ಯ ಸ್ಮಾರಕ ವಿದ್ಯಾಸಂಸ್ಥೆ ಆವರಣದಲ್ಲಿ ಬೈಠಕ್‌ನಲ್ಲಿ ಆರ್‌ಎಸ್‌ಎಸ್ ಬೆಂಗಳೂರು ನಗರ ಕಾರ್ಯವಾಹ ಕಾ.ಶಂ.ಶ್ರೀಧರ್‌ ಮಾತನಾಡಿ, ‘ಭಾರತವನ್ನು ವಿಶ್ವ ಗುರುವನ್ನಾಗಿ ನೋಡುವ ಹಂಬಲದೊಂದಿಗೆ ವಿಜಯ ದಶಮಿಯಂದು ಕೇಶವ ಹೆಗಡೆವಾರ ಅವರು ಕಟ್ಟಿ ಸಂಘ ಕಳೆದ 94 ವರ್ಷಗಳಿಂದ ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸಮಾಜಕ್ಕಾಗಿ ಸಮಯ ಕೊಡುವಂತಹ ವ್ಯಕ್ತಿಗಳನ್ನು ಶಾಖೆಗಳ ಮೂಲಕ ಸಂಘ ನಿರ್ಮಾಣ ಮಾಡುತ್ತಿದೆ’ ಎಂದು ಹೇಳಿದರು.

‘ಸಂಘ ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡುವ ಜತೆಗೆ ದೇಶಕ್ಕಾಗಿ ಕೆಲಸ ಮಾಡುವ ಮಾನಸಿಕತೆ ಬೆಳೆಸಿಕೊಳ್ಳಬೇಕಾದ ಜನರನ್ನು ತಯಾರು ಮಾಡುತ್ತಿದೆ. ಇವತ್ತು ಕೆಲವರು ಅನಪೇಕ್ಷಿತ ಚಟುವಟಿಕೆಯ ಮೂಲಕ ಹಿಂದೂ ಧರ್ಮಕ್ಕೆ ಚ್ಯುತಿ ತರಲು ಯತ್ನಿಸುತ್ತಿದ್ದಾರೆ. ಆಧ್ಯಾತ್ಮಿಕ ನಂಬಿಕೆ ಮತ್ತು ಆಚಾರ ವಿಚಾರಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇದನ್ನು ತಡೆಯಲು ಹಿಂದುಗಳು ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.

ವಿಶ್ವೇಶ್ವರಯ್ಯ ಸ್ಮಾರಕ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಪ್ರಕಾಶ್, ಆರ್‍ಎಸ್‍ಎಸ್‌ನ ನಗರ ಕಾರ್ಯವಾಹ ಅನಿಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.