ಚಿಕ್ಕಬಳ್ಳಾಪುರ: ‘ದೇಶದಲ್ಲಿ ಕೆಲವು ಕಡೆಗಳಲ್ಲಿ ಗೋ ಹಂತಕ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿವೆ. ಇವರಿಂದ ಸನಾತನ ಧರ್ಮ ಮತ್ತು ಸ್ವಾಮೀಜಿಗಳಿಗೆ ಅಪಮಾನ ಮಾಡಲಾಗುತ್ತಿದೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ತಾಲ್ಲೂಕಿನ ಕವರವನಹಳ್ಳಿಯಲ್ಲಿ ಹರಿಕೃಷ್ಣ ಫೌಂಡೇಶನ್ ಭಾನುವಾರ ಹಮ್ಮಿಕೊಂಡಿದ್ದ ಗೋದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಾನು ರೈಲ್ವೆ ಇಲಾಖೆ ಸಚಿವನಾಗಿದ್ದೆ. ರೈಲ್ವೆ ಆಸ್ತಿ 15 ಲಕ್ಷ ಎಕರೆ ಇದೆ. ಭಾರತದಲ್ಲಿ ಮೂರು ಪಾಕಿಸ್ತಾನ ಆಗುವಷ್ಟು ವಕ್ಫ್ ಆಸ್ತಿ ಇದೆ. ನರೇಂದ್ರ ಮೋದಿ ಈ ಕಾಯ್ದೆಗೆ ತಿದ್ದುಪಡಿ ತರದಿದ್ದರೆ ನಮ್ಮ ಜಮೀನು, ದೇಗುಲಗಳು ಉಳಿಯುತ್ತಿರಲಿಲ್ಲ’ ಎಂದರು.
‘ಶಿವಾಜಿ ಮಹಾರಾಜರು, ಅಂಬೇಡ್ಕರ್ ಅವರ ಇತಿಹಾಸವನ್ನು ನಮಗೆ ಕಲಿಸಲಿಲ್ಲ. ಕಾಂಗ್ರೆಸ್‌ನವರು ಟಿಪ್ಪುಸುಲ್ತಾನ್, ಔರಂಗಜೇಬ್ ಇತಿಹಾಸವನ್ನು ಕಲಿಸಿದರು’ ಎಂದರು.
‘ನನ್ನ ದಲಿತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಲೋಕಸಭೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇರಲಿಲ್ಲ. ನವದೆಹಲಿಯಲ್ಲಿ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಭಾರತ ರತ್ನ ಗೌರವವನ್ನು ಕಾಂಗ್ರೆಸ್ ನೀಡಲಿಲ್ಲ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಕುಮ, ಭಂಡಾರ ಹಚ್ಚಿಕೊಳ್ಳಲು ಅವರಿಗೆ ನಾಚಿಕೆ ಆಗುತ್ತದೆ. ಅದೇ ಮುಸ್ಲಿಮರ ಕಾರ್ಯಕ್ರಮದಲ್ಲಿ ಅರಬರ ವೇಷವನ್ನು ಧರಿಸುವರು. ಅದು ಅವರಿಗೆ ಖುಷಿ’ ಎಂದು ಲೇವಡಿ
ಮಾಡಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಹರಿಕೃಷ್ಣ ಫೌಂಡೇಶನ್‌ನ ಹರೀಶ್ ರೆಡ್ಡಿ ಅವರ ಈ ಕಾರ್ಯ ಮೆಚ್ಚುವಂತಹದ್ದು. ಈ ಗೋವು ಅವರಿಗೆ ಅನೇಕ ವರ್ಷ ಆಧಾರವಾಗಿ ಇರುತ್ತದೆ. ಈ ರೀತಿಯ ಗೋದಾನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಗೋವನ್ನು ರಕ್ಷಿಸುತ್ತಿರುವ ಕಾರಣಕ್ಕೆ ವಿಶ್ವದಲ್ಲಿ ನರೇಂದ್ರ ಮೋದಿ ಅವರಿಗೆ ಗೌರವವಿದೆ. ಆ ಹೆಸರನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಾಡಲಿ’ ಎಂದರು.
ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹರೀಶ್ ರೆಡ್ಡಿ ಮಾತನಾಡಿ, ‘ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ತಿಂಗಳಿಗೆ ₹ 2 ಸಾವಿರ ನೀಡುವರು. ಮದ್ಯದ ಹೊಳೆಯನ್ನೇ ರಾಜ್ಯದಲ್ಲಿ ಹರಿಸುವ ಮೂಲಕ ಆ ಕುಟುಂಬಗಳಿಂದ ದುಪ್ಪಟ್ಟು ಹಣ ಸುಲಿಯುತ್ತಿದೆ. ಜನರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಬಾರದು’ ಎಂದು
ಹೇಳಿದರು.
ವಿಶ್ವಹಿಂದೂ ಪರಿಷತ್ ಮುಖಂಡ ಮಂಜುನಾಥ್, ದಲಿತ ಸಂಘರ್ಷ ಸಮಿತಿ ಮುಖಂಡ ಬಿ.ಎನ್.ಗಂಗಾಧರಪ್ಪ, ಶಂಭು ಪಾಟೀಲ್, ರೈತ ಮುಖಂಡ ಮಲ್ಲೇಶ್, ಬ್ರಹ್ಮಾಂಡ ಗುರೂಜಿ, ಪಾಲನಹಳ್ಳಿ ಮಠದ ಸಿದ್ದರಾಜ ಸ್ವಾಮೀಜಿ, ನಟಿ ತನಿಶಾ ಕುಪ್ಪಂಡ, ವೈಷ್ಣವಿ, ನಿತು, ರಾಧಾ ಕೊಲ್ಲಿ ಮತ್ತಿತರರು ಪಾಲ್ಗೊಂಡಿದ್ದರು.
ಠೇವಣಿ ಬರುವುದಿಲ್ಲ
ಕರ್ನಾಟಕ ವಿಧಾನಸಭೆಯಲ್ಲಿ 224 ಶಾಸಕರಲ್ಲಿ ಚಿಕ್ಕಬಳ್ಳಾಪುರದವರು ಒಂದು ರತ್ನವನ್ನು ನೀಡಿದ್ದೀರಿ. ನನ್ನ ವಿರುದ್ಧ ವಿಜಯಪುರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಠೇವಣಿ ಬರಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೆಸರು ಹೇಳದೆ ಟೀಕಿಸಿದರು. ವಿಧಾನಸೌಧಕ್ಕೆ ಜೋಕರ್ ಬಂದಿದ್ದಾರೆ. ಚಿಕ್ಕಬಳ್ಳಾಪುರದ ರಸ್ತೆಗಳೇ ಇಲ್ಲಿನ ಅಭಿವೃದ್ಧಿಯ ಸ್ಥಿತಿಯನ್ನು ಹೇಳುತ್ತವೆ ಎಂದರು.
ಹಲವು ಕುಟುಂಬಕ್ಕೆ ಗೋದಾನ
ಹರೀಶ್ ರೆಡ್ಡಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವರನಹಳ್ಳಿ ಹಾಗೂ ಸುತ್ತಮುತ್ತಲಿನ ರೈತರಿಗೆ ರಾಸುಗಳನ್ನು ಉಚಿತವಾಗಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.