ADVERTISEMENT

ಸಂಭ್ರಮಕ್ಕೆ ಸುಗ್ಗಿ–ಹುಗ್ಗಿ ಮೆರಗು

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 4:10 IST
Last Updated 15 ಜನವರಿ 2021, 4:10 IST
ಜಂಗಾಲಪಲ್ಲಿ ಗ್ರಾಮದಲ್ಲಿ ಸುಗ್ಗಿ ಹಬ್ಬದಲ್ಲಿ ಸಂಭ್ರಮದಲ್ಲಿ ಭಾಗವಹಿಸಿ ಜನತೆ
ಜಂಗಾಲಪಲ್ಲಿ ಗ್ರಾಮದಲ್ಲಿ ಸುಗ್ಗಿ ಹಬ್ಬದಲ್ಲಿ ಸಂಭ್ರಮದಲ್ಲಿ ಭಾಗವಹಿಸಿ ಜನತೆ   

ಚೇಳೂರು: ‘ಈಗಿನ ಧಾವಂತ ಬದುಕು ಯಾಂತ್ರೀಕೃತವಾಗಿದ್ದು, ‘ಸುಗ್ಗಿ-ಹುಗ್ಗಿ’ ಎಂಬ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುಷ್ಠಾನಗೊಳಿಸಿ ಅರ್ಥಪೂರ್ಣ ಆಚರಣೆಗೆ ಚಾಲನೆ ನೀಡಿದಂತಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕ ನರಸಿಂಹಯ್ಯ ತಿಳಿಸಿದರು.

ಚೇಳೂರು ತಾಲ್ಲೂಕಿನ ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿಯ ಜಂಗಾಲಪಲ್ಲಿ ಗ್ರಾಮದ ಮೈದಾನದಲ್ಲಿ ಏರ್ಪಡಿಸಿದ್ದ ‘ಸುಗ್ಗಿ-ಹುಗ್ಗಿ ಸಿರಿಧಾನ್ಯಗಳ ಮೇಳದೊಂದಿಗೆ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಂತಾಮಣಿ ಕಾಲೇಜಿನ ಡಾ.ಎಂ.ಎನ್.ರಘು ಮಾತನಾಡಿ, ‘ಆಧುನಿಕ ಜಗತ್ತಿನ ಮೊರೆ ಹೋಗುತ್ತಿರುವ ಇಂದಿನವರು ಪೂರ್ವಜರು ಅನುಸರಿಸಿಕೊಂಡು ಬರುತ್ತಿರುವ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಯುವಂತೆಯಾಗಬೇಕು’ ಎಂದರು.

ADVERTISEMENT

ಜಂಗಾಲಪಲ್ಲಿ ಗ್ರಾಮದಲ್ಲಿ ಕೋದಂಡರಾಮಸ್ವಾಮಿ ದೇವಾಲಯ ಟ್ರಸ್ಟ್ ಗ್ರಾಮಸ್ಥರು ನಾಗರಿಕರು, ಮಹಿಳೆಯರು, ಸೇರಿಕೊಂಡು ಗ್ರಾಮವನ್ನು ಸ್ವಚ್ಛಗೊಳಿಸಿ ಸಿರಿಧಾನ್ಯ ಮೇಳ ಮತ್ತು ಪಾರಂಪರಿಕ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಬಣ್ಣದ ರಂಗೋಲಿ ಸ್ಪರ್ಧೆ ಮತ್ತು ಮಡಕೆ ಒಡೆಯುವ ಸ್ಪರ್ಧೆ ಬಣ್ಣದ ರಂಗೋಲಿಯನ್ನು ಬಿಡಿಸುವ ಮೂಲಕ ಗಮನಸೆಳೆದರು. ಜತೆಗೆ ಗ್ರಾಮೀಣ ಒಲೆಯನ್ನು ನಿರ್ಮಿಸಿಕೊಂಡು ಮಡಿಕೆಯಲ್ಲಿ ಹುಗ್ಗಿಯನ್ನು ಹಾಗೂ ಪಾಯಸವನ್ನು ತಯಾರಿಸುವ ಮೂಲಕ ಕಟ್ಟಿಗೆಯ ಉರುವಲಿನ ಆಹಾರದ ಸವಿಯನ್ನು ಉಣಬಡಿಸಿದರು.

ಜಾನಪದ ಗೀತೆ, ಸುಗ್ಗಿ ಹಾಡು, ಸೋಬಾನೆ ಪದ, ತತ್ತ್ವದ ಪದ, ಬೀಸು ಕಂಸಾಳೆ, ನಗಾರಿ, ವೀರ ಕುಣಿತ, ಸುಗ್ಗಿ ಕುಣಿತ, ಪೂಜಾ ಕುಣಿತ, ಕುದುರೆ ನತ್ಯ, ಗಾರುಡಿ ಗೊಂಬೆ, ಜಡೆ ಕೋಲಾಟ, ದೊಣ್ಣೆ ವರಸೆ, ತಾಳ ಮದ್ದಳೆ, ನಾದಸ್ವರ ಕಲಾ ಪ್ರಕಾರಗಳು ನೆರೆದಿದ್ದ ಗ್ರಾಮೀಣ ಜನರಿಗೆ ಮುದ ನೀಡಿತು.

ಕಲಾತಂಡಗಳ ಮೆರವಣಿಗೆಯಲ್ಲಿ ಪಟ ಕುಣಿತ, ವೀರಗಾಸೆ, ಚಕ್ಕ ಭಜನೆ, ಪೂಜಾ ಕುಣಿತ, ತಮಟೆ, ಕೀಲು ಕುದರೆ, ಡೊಳ್ಳು ಕುಣಿತ, ಕುಣಿತ,‍ ಡೋಲು, ನೃತ್ಯವಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿ.ಎಂ.ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ನಂಜಮ್ಮ, ಡಾ.ಪ್ರಸಾದ್, ಜನಪದ ಕಲಾ ಪುರಸ್ಕೃತ ಜಿ.ಮುನಿರೆಡ್ಡಿ, ಜನಪದ ಮುಖ್ಯಸ್ಥ ಅಶ್ವತ್ಥ, ಪಿಡಿಒ ವೆಂಕಟಾಚಲಪತಿ, ಸೋಸು ನಾಗೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.