ADVERTISEMENT

ಗೌರಿಬಿದನೂರು: ಶಾಸಕ ಪುಟ್ಟಸ್ವಾಮಿಗೌಡ ನೀಡಿದ ಬಾಗಿನದ ಸೀರೆ ಸುಟ್ಟ ಮಹಿಳೆಯರು

ವಾಟದಹೊಸಹಳ್ಳಿಯಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 3:10 IST
Last Updated 29 ಜುಲೈ 2025, 3:10 IST
ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ಬಾಗಿನದ ಸೀರೆಗೆ ಬೆಂಕಿ ಹಚ್ಚುತ್ತಿರುವುದು
ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ಬಾಗಿನದ ಸೀರೆಗೆ ಬೆಂಕಿ ಹಚ್ಚುತ್ತಿರುವುದು   

ಗೌರಿಬಿದನೂರು: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ವರಮಹಾಲಕ್ಷ್ಮಿ, ಮತ್ತು ಗೌರಿ, ಗಣೇಶ ಹಬ್ಬದ ಪ್ರಯುಕ್ತ ನೀಡಿದ ಬಾಗಿನದ ಸೀರೆಗೆ  ವಾಟದಹೊಸಹಳ್ಳಿಯಲ್ಲಿ ಮಹಿಳೆಯರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ವಾಟದಹೊಸಹಳ್ಳಿ ಕೆರೆ ನೀರನ್ನು ಗೌರಿಬಿದನೂರು ನಗರಕ್ಕೆ ಪೂರೈಸುವ ವಿಚಾರವಾಗಿ ವಾಟದಹೊಸಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಮತ್ತು ಶಾಸಕರ ನಡುವೆ ತೀವ್ರ ಜಟಾಪಟಿ ನಡೆದಿತ್ತು. 

ADVERTISEMENT

ಇತ್ತೀಚೆಗೆ ಸಚಿವ ಬೈರತಿ ಸುರೇಶ್ ಈ ಯೋಜನೆಗೆ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು. ಈ ಕಾರ್ಯಕ್ರಮದ ವೇಳೆ ಈ ಗ್ರಾಮಗಳ ರೈತರು,  ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಕಾರ್ಯಕ್ರಮ ಪೂರ್ಣವಾದ ತರುವಾಯ ಬಿಡುಗಡೆ ಮಾಡಿದ್ದರು.

ಕೆ.ಎಚ್ ಪುಟ್ಟಸ್ವಾಮಿ ಗೌಡ ಅವರು ತಾಲ್ಲೂಕಿನ ಮಹಿಳೆಯರಿಗೆ ವರಮಹಾಲಕ್ಷ್ಮಿ, ಮತ್ತು ಗೌರಿ, ಗಣೇಶ ಹಬ್ಬದ ಪ್ರಯುಕ್ತ ಬಾಗಿನ ರೂಪದಲ್ಲಿ ಸೀರೆ ವಿತರಿಸುತ್ತಿದ್ದಾರೆ. ವಾಟದಹೊಸಹಳ್ಳಿ, ಮತ್ತು ನಗರಗೆರೆ ಭಾಗದಲ್ಲಿ ಸೋಮವಾರ ಸೀರೆಗಳನ್ನು ವಿತರಿಸಲಾಗಿತ್ತು. 

ವಾಟದಹೊಸಹಳ್ಳಿಯ ಕೆಲವು ವಾರ್ಡ್‌ಗಳಲ್ಲಿ ಮಹಿಳೆಯರು ಸೀರೆಗಳನ್ನು ಸುಟ್ಟು ಹಾಕಿದ್ದಾರೆ. ‘ನಮ್ಮ ಕೆರೆಯ ನೀರನ್ನು ನಗರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ’
ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.