ADVERTISEMENT

ಬಡ್ತಿ ಮೀಸಲು ಕಾಯ್ದೆ ಜಾರಿ: ಸಂಭ್ರಮಾಚರಣೆ

ಸಮತಾ ಸೈನಿಕ ದಳದ ಕಾರ್ಯಕರ್ತರಿಂದ ನಗರದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 11:59 IST
Last Updated 31 ಜನವರಿ 2019, 11:59 IST
ನಗರದ ಅಂಬೇಡ್ಕರ್‌ ವೃತ್ತದಲ್ಲಿ ಸಮತಾ ಸೈನಿಕ ದಳದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ನಗರದ ಅಂಬೇಡ್ಕರ್‌ ವೃತ್ತದಲ್ಲಿ ಸಮತಾ ಸೈನಿಕ ದಳದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.   

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಪದ್ಧತಿ ಮತ್ತೆ ಜಾರಿಗೊಳಿಸುವ ‘ಬಡ್ತಿ ಮೀಸಲು ಕಾಯ್ದೆ–2017’ ಜಾರಿಗೆ ತಂದದ್ದನ್ನು ಸ್ವಾಗತಿಸಿ ನಗರದಲ್ಲಿ ಗುರುವಾರ ಸಮತಾ ಸೈನಿಕ ದಳದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಈ ವೇಳೆ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾ ಘಟಕ ಅಧ್ಯಕ್ಷ ವೆಂಕಟರಮಣಪ್ಪ, ‘ಬಡ್ತಿ ಮೀಸಲು ಕಾಯ್ದೆಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳ ಅಂಕಿತವಾಗಿ, ರಾಜ್ಯ ಸರ್ಕಾರ ಅಧಿಸೂಚನೆ ಸಹ ಹೊರಡಿಸಿದ್ದರೂ ಕಾಯ್ದೆ ಜಾರಿಯಾಗುವುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಡೆ ಹಿಡಿದಿದ್ದರು. ಅದನ್ನು ಖಂಡಿಸಿ ನಡೆದ ಅನೇಕ ಹೋರಾಟದ ಫಲವಾಗಿ ಸಚಿವ ಸಂಪುಟ ಕಾಯ್ದೆ ಜಾರಿಗೆ ಅನುಮೊದನೆ ನೀಡಿದ್ದು ಸಂತಸ ತಂದಿದೆ’ ಎಂದು ಹೇಳಿದರು.

‘ಹಿಂಬಡ್ತಿಗೆ ಗುರಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಸಮನಾಂತರ ಹುದ್ದೆ ಕಲ್ಪಸಿ ನ್ಯಾಯ ಕೊಡಿಸಲು ಜಾರಿಗೆ ತಂದಿರುವ ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಗೊಳಿಸುವ ಸಮ್ಮಿಶ್ರ ಸರ್ಕಾರದ ನಿರ್ಧಾರದಿಂದ ರಾಜ್ಯದಲ್ಲಿ 3,900ಕ್ಕೂ ಹೆಚ್ಚು ದಲಿತ ನೌಕರರಿಗೆ ನ್ಯಾಯ ಸಿಕ್ಕಂತಾಗಿದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರ 2002ರಲ್ಲಿ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕಾಯ್ದೆ ಅನ್ನು ಸುಪ್ರೀಂಕೋರ್ಟ್‌ ಪೀಠ ರದ್ದುಪಡಿಸಿತ್ತು. 1978ರಿಂದ ಪೂರ್ವಾನ್ವಯವಾಗುವಂತೆ ಸೇವಾ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಬೇಕು. ಕಾಯ್ದೆ ಅನ್ವಯ ಬಡ್ತಿಯಲ್ಲಿ ಮೀಸಲಾತಿ ಪಡೆದಿದ್ದವರಿಗೆ ಹಿಂಬಡ್ತಿ ನೀಡಬೇಕು. ಬಡ್ತಿಯಿಂದ ವಂಚಿತರಾಗಿದ್ದ ಪರಿಶಿಷ್ಟ ಜಾತಿಯೇತರ ಅಧಿಕಾರಿ, ಸಿಬ್ಬಂದಿಗೆ ಸಾಮಾಜಿಕ ನ್ಯಾಯದ ಪಾಲನೆ ದೃಷ್ಟಿಯಿಂದ ಮುಂಬಡ್ತಿ ನೀಡಬೇಕು ಎಂದು ಆದೇಶದಲ್ಲಿ ಹೇಳಿತ್ತು’ ಎಂದರು.

‘ಈ ತೀರ್ಪು ಜಾರಿಯಿಂದ ವಿವಿಧ ಇಲಾಖೆಗಳಲ್ಲಿರುವ ಪರಿಶಿಷ್ಟ ಸಮುದಾಯದ 3,900ಕ್ಕೂ ಹೆಚ್ಚು ನೌಕರರು ಹಿಂಬಡ್ತಿಗೆ ಒಳಗಾಗಿದ್ದರು. ಅವರಿಗೆ ರಕ್ಷಣೆ ನೀಡಲು ಹಿಂದಿನ ಕಾಂಗ್ರೆಸ್‌ ಸರ್ಕಾರ 2017ರ ಜೂನ್‌ 23ರಂದು ತಿದ್ದುಪಡಿ ಮಸೂದೆ ರೂಪಿಸಿತ್ತು’ ಎಂದು ತಿಳಿಸಿದರು.

‘ಈ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಆದರೆ ಕಾಯ್ದೆ ಜಾರಿಗೆ ಕುಮಾರಸ್ವಾಮಿ ಅವರು ಹಿಂದೇಟು ಹಾಕಿದ್ದರು. ಆದ್ದರಿಂದ 145 ಸಂಘಟನೆಗಳ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆಗೆ ನಿರ್ಧರಿಸಿದ್ದೆವು. ಅದನ್ನು ತಿಳಿದು ಸರ್ಕಾರ ಕಾಯ್ದೆ ಜಾರಿಗೆ ತಂದಿದೆ’ ಎಂದು ಹೇಳಿದರು.

ಸಂಘಟನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಭಾಕರ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಪದ್ಮಮ್ಮ , ಕಾರ್ಯದರ್ಶಿ ಕಮಲಮ್ಮ, ಮುಖಂಡರಾದ ಮುನಿರಾಜು, ಕಿರಣ್, ದ್ಯಾವಪ್ಪ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.