ADVERTISEMENT

ಸ್ಮಶಾನ ಜಾಗಕ್ಕಾಗಿ ಪರಿಶಿಷ್ಟರ ಪ್ರತಿಭಟನೆ

ತಹಶೀಲ್ದಾರ್ ಕೆ.ಅರುಂಧತಿ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:58 IST
Last Updated 2 ಅಕ್ಟೋಬರ್ 2020, 16:58 IST
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಕೆ.ಅರುಂಧತಿ ಹಾಗೂ ಡಿವೈಎಸ್‌ಪಿ ಲಕ್ಷ್ಮಯ್ಯ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಕೆ.ಅರುಂಧತಿ ಹಾಗೂ ಡಿವೈಎಸ್‌ಪಿ ಲಕ್ಷ್ಮಯ್ಯ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು   

ಶಿಡ್ಲಘಟ್ಟ: ಪರಿಶಿಷ್ಟರ ಸ್ಮಶಾನಕ್ಕೆ ಹೊಂದಿಕೊಂಡಿರುವ ಜಮೀನನ್ನು ಸ್ಮಶಾನಕ್ಕಾಗಿಯೇ ಮೀಸಲಿಡಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಕೆ.ಅರುಂಧತಿ ಹಾಗೂ ಡಿವೈಎಸ್‌ಪಿ ಲಕ್ಷ್ಮಯ್ಯ ಅವರನ್ನು ಭೇಟಿ ಮಾಡಿ ಪರಿಶೀಲಿಸಿದರು.

ನಗರದ ಸಿದ್ಧಾರ್ಥ ನಗರಕ್ಕೆ ಹೊಂದಿಕೊಂಡಿರುವ ದಿಬ್ಬೂರಹಳ್ಳಿ ಬೈಪಾಸ್ ರಸ್ತೆಯಲ್ಲಿರುವ ಸರ್ವೆ ನಂಬರ್ 554ರ ಸರ್ಕಾರಿ ಜಾಗವನ್ನು ಹಿಂದಿನಿಂದಲೂ ಸ್ಮಶಾನಕ್ಕಾಗಿ ಉಪಯೋಗಿಸಲಾಗಿತ್ತು. ಇದರ ಪಕ್ಕದಲ್ಲಿರುವ ಸ್ಥಳದಲ್ಲಿಯೂ ಕೆಲವರ ಅಂತ್ಯ ಸಂಸ್ಕಾರ ನಡೆಸಿದ್ದು ಈ ಸ್ಥಳವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲು ಕೋರಿದ್ದ ಪ್ರಕರಣ ಇದೀಗ ಎಸಿ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಇದೀಗ ಪಕ್ಕದಲ್ಲಿಯೇ ಇರುವ ನಿವಾಸಿ ರಾಜ್‌ಕುಮಾರ್ ಅವರು ಈ ಸ್ಥಳವನ್ನು ಖರೀದಿಸಿದ್ದೇನೆ ಎಂದು ಹೇಳಿ ನಿವೇಶನ ಸ್ವಚ್ಛಗೊಳಿಸುತ್ತಿದ್ದಾಗ ಸ್ಥಳಕ್ಕೆ ಹೋದ ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ರಾಜ್‌ಕುಮಾರ್ ಕುಟುಂಬದ ನಡುವೆ ಶನಿವಾರ ಬೆಳಗ್ಗೆ ಗಲಾಟೆಯಾಗಿ, ಎರಡೂ ಕಡೆಯವರಿಗೂ ಸಣ್ಣ, ಪುಟ್ಟ ಗಾಯಗಳಾಗಿವೆ.

ಡಿವೈಎಸ್‌ಪಿ ಲಕ್ಷ್ಮಯ್ಯ ಮಾತನಾಡಿ, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಸ್ಥಳದ ಬಗ್ಗೆ ಎಸಿ ಯಾವ ರೀತಿ ಆದೇಶ ನೀಡುತ್ತಾರೊ ಅದನ್ನು ಎಲ್ಲರೂ ಪಾಲಿಸಬೇಕು. ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೂ ಎರಡೂ ಕಡೆಯವರು ಈ ಸ್ಥಳದಲ್ಲಿ ಯಾವುದೇ ಕೆಲಸ ನಡೆಸಬಾರದು ಎಂದು ಸೂಚಿಸಿದರು.

ADVERTISEMENT

ತಹಶೀಲ್ದಾರ್ ಕೆ.ಅರುಂಧತಿ, ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ್, ಗ್ರಾಮಾಂತರ ಠಾಣೆ ಪಿಎಸ್‌ಐ ಲಿಯಾಕತ್‌ ಉಲ್ಲಾ, ನಗರಠಾಣೆ ಪಿಎಸ್‌ವೈ ಸಂಗಮೇಶ್ ಮೇಟಿ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.