
ಮಂಚೇನಹಳ್ಳಿ: ತಾಲ್ಲೂಕಿನ ಜರಬಂಡಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಹನುಮಂತಪುರದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುಳಾ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳು ಮತ್ತು ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಿಶೀಲಿಸಿದರು.
ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್ ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ತಲುಪುವಂತೆ ಮಾಡಬೇಕು. ಸ್ವಚ್ಛತೆ ಕಾಪಾಡಿ ಉತ್ತಮ ಗುಣಮಟ್ಟದ ಆಹಾರ ನೀಡಲು ಹೆಚ್ಚಿನ ಆದ್ಯತೆ ವಹಿಸಬೇಕಾಗಿದೆ. ವಸತಿ ನಿಲಯದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಜತೆಗೆ ನಿತ್ಯ ವಿದ್ಯಾರ್ಥಿನಿಯರ ರಕ್ಷಣೆಗೆ ಪ್ರಮುಖ ಜವಾಬ್ದಾರಿ ವಹಿಸಬೇಕು. ವಸತಿ ನಿಲಯದಲ್ಲಿ ಅಹಿತಕರ ಘಟನೆ ನಡೆದಲ್ಲಿ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿ.ಪಂ ಸಿಇಒ ಪ್ರಕಾಶ್ ಜಿ.ನಿಟ್ಟಾಳಿ ಮಾತನಾಡಿ, ವಸತಿ ನಿಲಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾ.ಪಂ ನಿಂದ ಅಗತ್ಯವಿರುವ ಸಹಕಾರ ಪಡೆದುಕೊಳ್ಳಬಹುದು ಎಂದು ಹೇಳಿದರು.
ತಹಶೀಲ್ದಾರ್ ಮಹೇಶ್.ಎಸ್.ಪತ್ರಿ, ತಾ.ಪಂ ಇಒ ಆರ್.ಹರೀಶ್, ಸಹಾಯಕ ನಿರ್ದೇಶಕರು ಗ್ರೇಡ್ 1 ಸಮಾಜ ಕಲ್ಯಾಣ ಇಲಾಖೆ ಚನ್ನಪ್ಪ ಎಸ್.ಗೌಡ ನಾಯಕರ್, ಪಿಡಿಒ ಮಧು, ಶ್ರೀನಾಥ್ ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.