ADVERTISEMENT

ಗೌರಿಬಿದನೂರು: ಕೆಸರು ಗದ್ದೆಯಾದ ಕೋಟೆ ಶಾಲೆ ಆವರಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:10 IST
Last Updated 20 ಆಗಸ್ಟ್ 2025, 5:10 IST
ಗೌರಿಬಿದನೂರು ನಗರದ ಹೃದಯ ಭಾಗದಲ್ಲಿರುವ ಕೋಟೆ ಶಾಲೆ ಆವರಣ ಮಳೆಯಿಂದ ಕೆಸರು ಗದ್ದೆಯಾಗಿದೆ
ಗೌರಿಬಿದನೂರು ನಗರದ ಹೃದಯ ಭಾಗದಲ್ಲಿರುವ ಕೋಟೆ ಶಾಲೆ ಆವರಣ ಮಳೆಯಿಂದ ಕೆಸರು ಗದ್ದೆಯಾಗಿದೆ   

ಗೌರಿಬಿದನೂರು: ನಗರದ ಹೃದಯ ಭಾಗದಲ್ಲಿರುವ ಕೋಟೆ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೋಟೆ ಬಾಲಕಿಯರ ಶಾಲೆಯ ಪ್ರವೇಶ ದ್ವಾರದಲ್ಲಿ ‘ಜಾರಿ ಬೀಳುವ ಅಪಾಯ ಇದೆ ಜೋಪಾನವಾಗಿ ಒಳಗೆ ಬನ್ನಿ’ ಎನ್ನುವಂತಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.

ಈ ಶಾಲೆಗೆ 1400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಮುಖ್ಯರಸ್ತೆಯಿಂದ ಶಾಲೆ ಒಳಗೆ ಹೋಗಿ ಬರಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ವಿಪರ್ಯಾಸವೆಂದರೆ ಇದೇ ಶಾಲೆ ಆವರಣದಲ್ಲಿ ಬಿಇಒ ಕಚೇರಿ, ಬಿಆರ್‌ಸಿ ಕಚೇರಿ, ನಗರ ಕ್ಲಸ್ಟರ್ ಕಚೇರಿಗಳಿವೆ. ಆದರೂ ವಿದ್ಯಾರ್ಥಿಗಳು ಮಳೆ ಬಂದಾಗ ಕೆಸರಿನಲ್ಲಿ ಓಡಾಡುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಕಾಣಿಸದೇ ಇರುವುದು ವಿಪರ್ಯಾಸ ಎನ್ನುತ್ತಾರೆ ಪೋಷಕರು.

ADVERTISEMENT

ಪ್ರತಿ ವರ್ಷ ಮಳೆಗಾಲ ಬಂತೆಂದರೆ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚು ನೀರು ಶೇಖರಣೆಯಾಗಿ ಆವರಣ ಕೆಸರಾಗುತ್ತದೆ. ಇದರಿಂದ ಮಕ್ಕಳಿಗೆ ರೋಗ ಹರಡುವ ಭೀತಿ ಎದುರಾಗುತ್ತಿದೆ. ಆವರಣದಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಬೇಕು ಎಂದು ಪೋಷಕರು ಒತ್ತಾಯಿಸಿದರು.

ಪ್ರತಿವರ್ಷ ಮಳೆ ಬಂದಾಗಲೂ ಶಾಲೆ ಆವರಣದಲ್ಲಿ ಮಳೆ ನೀರು ನಿಂತು ರಚ್ಚೆ ಆಗುತ್ತದೆ. ಇದೇ ಆವರಣದಲ್ಲಿ ಆಡಳಿತ ಮಂಡಳಿ ಇದೆ. ಇದನ್ನು ಸರಿಪಡಿಸಲು ಈವರೆಗೆ ಯಾವುದೇ ಕ್ರಮಕೈಗೊಳ್ಳದೆ ವಿದ್ಯಾರ್ಥಿಗಳ ಪಡುವ ಪರಿಪಾಟಲುಗಳನ್ನು ನೋಡಿಕೊಂಡು ಸುಮ್ಮನಿದ್ದಾರೆ. ಇದು ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರಿಗೆ ಮತ್ತು ಅಧಿಕಾರಿಗಳಿಗೆ ಇರುವ ತಾತ್ಸಾರ ಮನೋಭಾವ ತೋರಿಸುತ್ತದೆ ಎಂದು ಪೋಷಕಿ ಭಾರತಿ ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಆವರಣದಲ್ಲಿ ಅನೇಕ ಕಚೇರಿಗಳಿವೆ ಹಾಗೂ ಪಕ್ಕದಲ್ಲಿ ಸರ್ಕಾರಿ ಕಟ್ಟಡ ಕಾಮಗಾರಿ ನಡೆಯುತ್ತಿರುವುದರಿಂದ ಶಾಲಾ ಆವರಣದಲ್ಲಿ ಗುಂಡಿಗಳು ಬಿದ್ದು, ನೀರು ನಿಂತು ಕೆಸರುಮಯವಾಗಿದೆ. ಶೀಘ್ರದಲ್ಲಿ ಎತ್ತರಕ್ಕೆ ಮಣ್ಣು ಹಾಕಿಸಿ ಸರಿಪಡಿಸಲಾಗುವುದು ಎಂದು ಪ್ರಾಂಶುಪಾಲ ಶ್ರೀನಿವಾಸ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.