ADVERTISEMENT

ವಸತಿ ಶಾಲೆ ಬಾಲಕಿ ಗರ್ಭಿಣಿ

ಶಾಲೆ ಪ್ರಾಂಶುಪಾಲೆ, ವಸತಿ ನಿಲಯ ಪಾಲಕಿ ಅಮಾನತು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:27 IST
Last Updated 6 ಫೆಬ್ರುವರಿ 2026, 7:27 IST

ಚಿಂತಾಮಣಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿದ್ದು, ಬಾಲಕಿ ನೀಡಿದ ಹೇಳಿಕೆ ಆಧರಿಸಿ ಆಕೆಯ ಸೋದರ ಮಾವನ ವಿರುದ್ಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ಸಂಬಂಧ ಶಾಲೆ ಪ್ರಾಂಶುಪಾಲೆ ಡಿ.ವಿ. ನಾಗರತ್ನಮ್ಮ, ಪ್ರಭಾರಿ ನಿಲಯಪಾಲಕಿ ಬಿ.ಎಸ್. ಸವಿತಾ ಕುಮಾರಿ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ಪಿ.ಎಸ್. ಕಾಂತರಾಜು ಅಮಾನತುಗೊಳಿಸಿದ್ದಾರೆ.

ಮೇಲ್ನೋಟಕ್ಕೆ ಪ್ರಾಂಶುಪಾಲೆ ಮತ್ತು ನಿಲಯ ಪಾಲಕಿಯ ಕರ್ತವ್ಯಲೋಪ ಕಂಡುಬರುತ್ತಿದೆ. ಇಲಾಖಾ ವಿಚಾರಣೆ ಕಾಯ್ದಿರಿಸಿ ಈ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಎರಡು– ಮೂರು ತಿಂಗಳಿನಿಂದ ವಿದ್ಯಾರ್ಥಿನಿಯ ದೇಹದಲ್ಲಿ ಆಗುತ್ತಿರುವ ಬದಲಾವಣೆ ಗಮನಿಸಿದ ವಿದ್ಯಾರ್ಥಿನಿಯರ ನಿಲಯದ ಮೇಲ್ವಿಚಾರಕರು, ಬಾಲಕಿಯ ಪೋಷಕರನ್ನು ಶಾಲೆ ಕರೆಸಿದ್ದರು. ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ. 

ವಸತಿ ಶಾಲೆ ವಿದ್ಯಾರ್ಥಿನಿಯರನ್ನು ಪ್ರತಿ ತಿಂಗಳು ನಿಯಮಿತವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಬೇಕು. ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸದೇ ಇರುವುದು ಈ ಘಟನೆಗೆ ಕಾರಣ ಎಂಬ ವಿಷಯ ಮೇಲ್ನೋಟಕ್ಕೆ ಕಂಡು ಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.