
ಶಿಡ್ಲಘಟ್ಟ: ‘ಶಾಲಾ ಮಕ್ಕಳು ಬರೀ ಪಠ್ಯವನ್ನು ಓದುವುದಕ್ಕೆ ಸೀಮಿತವಾಗದೆ ಪ್ರಾಪಂಚಿಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ತಂದೆ, ತಾಯಿ ಓದಿಸಲು ಎಷ್ಟು ಕಷ್ಟ ಪಡುತ್ತಾರೆ, ಕುಟುಂಬ ನಿರ್ವಹಣೆ ಹೇಗೆ ನಿಭಾಯಿಸುತ್ತಾರೆ ಎಂದು ತಿಳಿದುಕೊಳ್ಳಬೇಕು’ ಎಂದು ಚಿಮುಲ್‌ನ ನೂತನ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಲಕ್ಷ್ಮಿ ವಿದ್ಯಾನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ನಾವು ಸ್ಪರ್ಧಾ ಜಗತ್ತಿನಲ್ಲಿದ್ದೇವೆ. ವಿದ್ಯಾರ್ಥಿಗಳು ಕೇವಲ ಉತ್ತಮ ಅಂಕಗಳಿಸಿದರೆ ಸಾಲದು. ಉತ್ತಮ ವೃತ್ತಿ ಕೌಶಲ ಬೆಳೆಸಿಕೊಳ್ಳಬೇಕು. ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗ, ವ್ಯಾಪಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಬೇಕಿದೆ’ ಎಂದರು.
‘ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಅಂಕಗಳಿಸುವಂತೆ ಪೋಷಕರು, ಶಿಕ್ಷಕರು ಒತ್ತಡ ಹಾಕಲು ಮುಂದಾಗಬಾರದು. ಮಕ್ಕಳ ಕಲಿಕಾ ಸಾಮರ್ಥ್ಯ, ಆಸಕ್ತಿ, ಗ್ರಹಿಸುವ ಶಕ್ತಿಯನ್ನು ಅನುಸರಿಸಿ ಅವರಿಗೆ ಅವಕಾಶ ಒದಗಿಸಿಕೊಡುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ಕೃಷ್ಣಾರೆಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಲಕ್ಷ್ಮಿ ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಧ್ಯಕ್ಷ ಸ್ಕೂಲ್ ದೇವರಾಜ್, ಬ್ಯಾಟರಾಯಶೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.