ADVERTISEMENT

ಹಿಜಾಬ್: ಅಪ್ಪ ಬುದ್ಧಿ ಹೇಳಿದ್ರೂ ಪರೀಕ್ಷೆ ಬರೆಯದ ಪುತ್ರಿ

ಡಿಡಿಪಿಯು, ಪ್ರಾಂಶುಪಾಲರ ಮನವೊಲಿಕೆಗೆ ಒಪ್ಪದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 15:54 IST
Last Updated 22 ಏಪ್ರಿಲ್ 2022, 15:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಹಿಜಾಬ್ ತೆಗೆದಿರಿಸಿ ಪರೀಕ್ಷೆ ಬರೆಯುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ, ಪೋಷಕರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಪ್ರಾಂಶುಪಾಲರು ಮನವೊಲಿಸಿದರೂ ಒಪ್ಪದೆ ಕೇಂದ್ರದಿಂದ ವಿದ್ಯಾರ್ಥಿನಿ ಹೊರನಡೆದ ಪ್ರಸಂಗ ಇಲ್ಲಿ ನಡೆಸಿದೆ.

ಶುಕ್ರವಾರದಿಂದ ದ್ವಿತೀಯ ಪಿಯು ಪರೀಕ್ಷೆಗಳು ಆರಂಭವಾಗಿವೆ. ನಗರದ ಸರ್‌ ಎಂ. ವಿಶ್ವೇಶ್ವರಯ್ಯ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಚಿಕ್ಕಬಳ್ಳಾಪುರದ ಬ್ಲೂಮ್ಸ್ ಕಾಲೇಜಿನ ವಿದ್ಯಾರ್ಥಿನಿ ನೂರ್ ನಿಜ್ಬ್‌ ಪರೀಕ್ಷೆ ಬರೆಯಲು ಇಬ್ಬರು ಗೆಳತಿಯರ ಜತೆ ಬಂದಿದ್ದರು. ಕೇಂದ್ರದ ಒಳಗೆ ಹೋಗುತ್ತಲೇ ಸಿಬ್ಬಂದಿಯ ಮಾತು ಕೇಳಿ ಸ್ನೇಹಿತೆಯರು ಹಿಜಾಬ್ ತೆಗೆದಿರಿಸಿದ್ದಾರೆ. ಆದರೆ, ನೂರ್ ನಿಜ್ಬ್‌ ಹಿಜಾಬ್ ತೆಗೆದಿರಿಸಿಲ್ಲ.

‘ನಾವು ಎಷ್ಟೇ ಮನವೊಲಿಸಿದರೂ ನಾನು ಹಿಜಾಬ್ ತೆಗೆದು ಪರೀಕ್ಷೆ ಬರೆಯುವುದಿಲ್ಲ. ಹಿಜಾಬ್ ತೆಗೆದರೆ ನನಗೆ ಪರೀಕ್ಷೆ ಬರೆಯಲು ಆಗುವುದಿಲ್ಲ ಎಂದು ವಿದ್ಯಾರ್ಥಿನಿ ಹೇಳಿದಳು. ಆಕೆಯ ಪೋಷಕರಿಗೆ, ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆನಂದ್ ಅವರಿಗೆ ಕರೆ ಮಾಡಿ ವಿದ್ಯಾರ್ಥಿನಿಯ ಜತೆ ಮಾತನಾಡಿಸಿದೆವು. ಆಕೆಯ ಅಪ್ಪ ಕೂಡ ಬುದ್ಧಿ ಹೇಳಿದರೂ ಪರೀಕ್ಷೆ ಬರೆಯದೆ ಕೊಠಡಿಯಿಂದ ಹೊರ ನಡೆದಳು’ ಎಂದು ಕೇಂದ್ರದ ಸಿಬ್ಬಂದಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.