ADVERTISEMENT

ಗೌರಿಬಿದನೂರು: ಹಿರಿಯ ದಂಪತಿ ಆಯ್ಕೆ

ಎ.ಎಸ್.ಜಗನ್ನಾಥ್
Published 20 ಡಿಸೆಂಬರ್ 2020, 3:55 IST
Last Updated 20 ಡಿಸೆಂಬರ್ 2020, 3:55 IST
ಬಿ.ಪಿ. ಕೃಷ್ಣಮೂರ್ತಿ
ಬಿ.ಪಿ. ಕೃಷ್ಣಮೂರ್ತಿ   

ಗೌರಿಬಿದನೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೀಸಲಾತಿಗೆ ಅನುಗುಣವಾಗಿ ಸ್ಪರ್ಧಿಸಲು ತೀವ್ರ ಹಣಾಹಣಿ ಇದ್ದರೂ ಕೂಡ ಗ್ರಾಮದ ಯುವಕರು ಮತ್ತು‌ ಗ್ರಾಮಸ್ಥರ ಒಮ್ಮತದ ನಿರ್ಣಯದಂತೆ ಹಿರಿಯರಾದ ದಂಪತಿಯಾದ ಬಿ.ಪಿ. ಕೃಷ್ಣಮೂರ್ತಿ ‌ಹಾಗೂ ಸರೋಜಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಂದಾರ್ಲಹಳ್ಳಿ ಮತ್ತು ಕ್ರಿಶ್ಚಿಯನ್ ಕಾಲೊನಿಯ ಎರಡು ಸ್ಥಾನಗಳಿಗೆ ಬಿಸಿಎಂ (ಆ) ಮತ್ತು ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿತ್ತು. ಇದರಂತೆ ಗ್ರಾಮದ ಹಿರಿಯರು ಹಾಗೂ ಮಾಜಿ ಶಾಸಕ ಬಿ.ಎನ್.ಕೆ.‌ ಪಾಪಯ್ಯ ಅವರ ಪುತ್ರ ಬಿ.ಪಿ. ಕೃಷ್ಣಮೂರ್ತಿ ಹಾಗೂ ಸೊಸೆ ಸರೋಜಮ್ಮ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ ಯುವಕರು ಅವರ ವಿರೋಧವಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ ಇಳಿ ವಯಸ್ಸಿನ ದಂಪತಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ.

ಕೃಷ್ಣಮೂರ್ತಿ ಅವರು ತಾ.ಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಪರಿಷತ್ತಿನ ಸದಸ್ಯರಾಗಿ ಅಧಿಕಾರ ಉಂಡವರು ಮತ್ತು ಅನುಭವಿಗಳಾಗಿದ್ದಾರೆ. ತಾಲ್ಲೂಕಿನ ರಾಜಕೀಯದಲ್ಲಿ ಸಕ್ರಿಯವಾಗಿರದಿದ್ದರೂ ತೊಂಡೇಬಾವಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಜನಬೆಂಬಲ ಹೊಂದಿದ್ದಾರೆ. ಅಲ್ಲದೆ ದಶಕಗಳ ಹಿಂದೆಯೇ ಹಲವು ಗ್ರಾಮಗಳ ನಿವೇಶನರಹಿತರಿಗೆ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಿಕೊಟ್ಟಿರುವ ನಿದರ್ಶನಗಳಿವೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಈ ವಿಚಾರವಾಗಿ ಮುಖಂಡ ಕೃಷ್ಣಮೂರ್ತಿ ಅವರನ್ನು ವಿಚಾರಿಸಿದರೆ, ‘ಕಳೆದ 3-4 ದಶಕಗಳಿಂದಲೂ ರಾಜಕೀಯವಾಗಿ ಸಕ್ರಿಯವಾಗಿದ್ದೇವೆ. ಸ್ಥಳೀಯ ಜನತೆಗೆ ಅವಶ್ಯಕವಿರುವ ಮೂಲಸೌಕರ್ಯ ಕಲ್ಪಿಸಿದ್ದೇವೆ. ಅವರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗೆ ಅರ್ಹತೆ ಪಡೆದಿದ್ದೇವೆ. ಇದರಿಂದಾಗಿ ಇಂದು ಗ್ರಾಮಸ್ಥರ ಹಾಗೂ ಯುವಕರ ಒಮ್ಮತದ ನಿರ್ಧಾರದಿಂದ ನಮ್ಮನ್ನು ಗ್ರಾಮದಲ್ಲಿ ಗ್ರಾ.ಪಂ. ಸದಸ್ಯರನ್ನಾಗಿ ಮಾಡಿದ್ದಾರೆ. ಅವರೆಲ್ಲರ ಪ್ರೀತಿ, ವಿಶ್ವಾಸಕ್ಕೆ ಸದಾ ಚಿರಋಣಿ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಬದ್ಧ’ ಎನ್ನುತ್ತಾರೆ.

ಗ್ರಾಮದ ಯುವಕ ಬಿ.ಎಂ. ಅಜಯ್ ಮಾತನಾಡಿ, ಗ್ರಾಮದಲ್ಲಿ ದಶಕಗಳಿಂದಲೂ ಸಾಕಷ್ಟು ಅಭಿವೃದ್ಧಿ ‌ಕಾರ್ಯಗಳ ಜೊತೆಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಿ, ಬಡವರ ಹಾಗೂ ಕೂಲಿ ಕಾರ್ಮಿಕರ ಸಂಕಷ್ಟಗಳಿಗೆ ಆಸರೆಯಾಗಿರುವ ಹಿರಿಯರಾ ಕೃಷ್ಣಮೂರ್ತಿ ಅವರ ಮಾರ್ಗದರ್ಶನ ಗ್ರಾಮಸ್ಥರಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಯುವಕರು ಹಾಗೂ ಗ್ರಾಮಸ್ಥರ ಒಮ್ಮತದ ನಿರ್ಧಾರದಿಂದ ಕೃಷ್ಣಮೂರ್ತಿ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.