ADVERTISEMENT

ಅಲೀಪುರ ಗ್ರಾಮದಲ್ಲಿ 380 ಅಂಗವಿಕಲರ ಸ್ವಾವಲಂಬನೆ ಪಾಠ

l ವಾಕ್‌–ಶ್ರವಣದೋಷವುಳ್ಳವರೇ ಹೆಚ್ಚು

ಎ.ಎಸ್.ಜಗನ್ನಾಥ್
Published 3 ಡಿಸೆಂಬರ್ 2020, 4:39 IST
Last Updated 3 ಡಿಸೆಂಬರ್ 2020, 4:39 IST
ಅಲೀಪುರದಲ್ಲಿ ಅಂಗವಿಕಲ ಸಮಸ್ಯೆಯಿಂದ ಬಳಲುತ್ತಿರುವ ಯುವಕರು
ಅಲೀಪುರದಲ್ಲಿ ಅಂಗವಿಕಲ ಸಮಸ್ಯೆಯಿಂದ ಬಳಲುತ್ತಿರುವ ಯುವಕರು   

ಗೌರಿಬಿದನೂರು: ತಾಲ್ಲೂಕಿನ 260ಕ್ಕೂ ಹೆಚ್ಚು ಗ್ರಾಮಗಳಲ್ಲಿ 4,594 ಮಂದಿ ಅಂಗವಿಕಲರಿದ್ದು, ಇದರಲ್ಲಿ ಒಂದೇ ಗ್ರಾಮದಲ್ಲಿ 380ಕ್ಕೂ ಹೆಚ್ಚು ಮಂದಿ ಇದ್ದಾರೆ!

ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಅಲೀಪುರ ಗ್ರಾಮದಲ್ಲಿ ಬಹುತೇಕ ಮಂದಿ ಮುಸ್ಲಿಂ ಸಮುದಾಯದವರು ವಾಸಿಸುತ್ತಿದ್ದಾರೆ. ಇವರಲ್ಲಿ ವಿವಿಧ ಬಗೆಯ ಅಂಗವಿಕಲತೆ ಹೊಂದಿರುವ ಜತೆಗೆ ವಾಕ್‌ ಮತ್ತು ಶ್ರವಣದೋಷವುಳ್ಳ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ.

ಸಾಮಾನ್ಯವಾಗಿ ಪ್ರತಿ ಹಳ್ಳಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ವಿವಿಧ ಅಂಗವಿಕಲತೆ ಸಮಸ್ಯೆ ಎದುರಿಸುತ್ತಿರುತ್ತಾರೆ. ಆದರೆ ಈ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ADVERTISEMENT

ದೈಹಿಕ ಅಂಗವಿಕಲತೆ, ಶ್ರವಣದೋಷ, ದೃಷ್ಟಿ ದೋಷ, ಕುಷ್ಠರೋಗ ನಿವಾರಿತರು, ವಾಕ್ ಮತ್ತು ಶ್ರವಣ ದೋಷವುಳ್ಳವರು ಹಾಗೂ ಬಹುವಿಧ ಅಂಗವಿಕತೆಯಿಂದ ಕೂಡಿದವರು ಸೇರಿದಂತೆ ಒಟ್ಟು 7 ಬಗೆಯಲ್ಲಿ ಅಂಗವಿಕಲರನ್ನು ವರ್ಗೀಕರಿಸಲಾಗಿದೆ. ಆದರೆ, ಅಲೀಪುರದಲ್ಲಿನ 380ಕ್ಕೂ ಹೆಚ್ಚು ಮಂದಿಯಲ್ಲಿ ಬಹುತೇಕವಾಗಿ ಕಾಣಸಿಗುವುದು ವಾಕ್ ಮತ್ತು ಶ್ರವಣದೋಷ ಸಮಸ್ಯೆ ಎನ್ನುತ್ತಾರೆ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಎಸ್. ಕೃಷ್ಣಪ್ಪ.

ರಾಜ್ಯದ ‘ಮಿನಿ ಇರಾನ್’ ಎಂದೇ ಪ್ರಖ್ಯಾತಿ ಪಡೆದ ಈ ಗ್ರಾಮದಲ್ಲಿ ಇಷ್ಟೊಂದು ಮಂದಿ ಅಂಗವಿಕತೆ ಹೊಂದಲು ಪ್ರಮುಖವಾಗಿ ಯುವಕರು ಒಂದೇ ಕುಟುಂಬದ ಸದಸ್ಯರನ್ನು ಮದುವೆ ಮಾಡಿಕೊಳ್ಳುತ್ತಾರೆ. ಇದರಿಂದ ಈ ಕುಟುಂಬದಲ್ಲಿನ ಅನುವಂಶೀಯ ಸಮಸ್ಯೆಗಳು ಅದೇ ಕುಟುಂಬದಲ್ಲಿ‌ ಜನಿಸಿದ ಮಕ್ಕಳಿಗೆ ವರ್ಗಾವಣೆಯಾಗುತ್ತಿವೆ. ಇದರಿಂದಾಗಿ ಒಂದೇ ಸಮುದಾಯದವರು ಹೆಚ್ಚಾಗಿರುವ ಈ ಗ್ರಾಮದಲ್ಲಿ ಹೆಚ್ಚಾಗಿ ಅಂಗವಿಕಲ ಸಮಸ್ಯೆಗಳನ್ನು ‌ಕಾಣಬಹುದಾಗಿದೆ.

ಈ ಗ್ರಾಮದಲ್ಲಿನ ಕೆಲವು ಯುವಕರು ಮಾನಸಿಕ ಮತ್ತು ಬೌದ್ಧಿಕವಾಗಿ ಪ್ರಬುದ್ಧತೆ ಹೊಂದಿದ್ದಾರೆ. ಆದರೆ ಇವರಲ್ಲಿ ಶ್ರವಣ ಅಥವಾ ಮಾತಿನ ಸಮಸ್ಯೆ ಎದುರಾಗಿ ಅಂಗವಿಕಲತೆ ಹೊಂದಿರುತ್ತಾರೆ. ಆದರೂ ಸಮಾಜಕ್ಕೆ ಹೆದರದೆ ಸ್ವಉದ್ಯೋಗ ಅವಲಂಬಿಸಿ ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಂಡು
ಇತರರಿಗೆ ಮಾದರಿಯಾಗಿ‌ ಬದುಕುತ್ತಿದ್ದಾರೆ.

‘ಅಂಗವಿಕಲತೆ ಇದ್ದರೂ ಸ್ವಾವಲಂಬಿಗಳಾಗಿ ಬದುಕಲು ಯಾವುದೇ ತೊಂದರೆಯಿಲ್ಲ. ಈ ನಿಟ್ಟಿನಲ್ಲಿ ಗ್ರಾಮದಲ್ಲಿನ ಅಂಗವಿಕಲರಿಗೆ ಸಮಾಜದಲ್ಲಿ ಬದುಕಲು ಹಾಗೂ ಇತರರೊಂದಿಗೆ ಸಂವಹನ ನಡೆಸಲು‌ ನೆರವಾಗುವ ನಿಟ್ಟಿನಲ್ಲಿ ಅವರ ಮಾನಸಿಕ ಶಕ್ತಿಗೆ ಅನುಗುಣವಾಗಿ ಕೆಲವೊಂದು ಭೌತಿಕ ಕ್ರಿಯೆಗಳನ್ನು ಕಲಿಸಲಾಗಿದೆ. ಇದರ ಸಹಾಯದಿಂದ ಅವರು ಕೈ ಸಹ್ನೆಗಳ ಮೂಲಕ ಇತರರೊಂದಿಗೆ ಚರ್ಚಿಸಲು ಸಾಧ್ಯವಾಗುತ್ತಿದೆ‌. ಗ್ರಾಮದಲ್ಲಿನ ಬಹುತೇಕ ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಮಾಸಾಶನ ಹಾಗೂ ಇತರರೇ ಸೌಲಭ್ಯ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಮೀರ್ ಫಾಸಿಲ್ ರಜಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.