ADVERTISEMENT

ಚಿಕ್ಕಬಳ್ಳಾಪುರ: ‘ಅಭಿವೃದ್ಧಿ’ಯ ಅಣಕಿಸುತ್ತಿವೆ ಚರಂಡಿಗಳು

ಚಿಕ್ಕಬಳ್ಳಾಪುರ ನಗರದಲ್ಲಿ ದುರ್ನಾತ ಬೀರುತ್ತಿವೆ ಚರಂಡಿಗಳು; ಬಹುತೇಕ ಬಡಾವಣೆಗಳಲ್ಲಿ ಅವ್ಯವಸ್ಥೆ

ಡಿ.ಎಂ.ಕುರ್ಕೆ ಪ್ರಶಾಂತ
Published 9 ಫೆಬ್ರುವರಿ 2023, 5:17 IST
Last Updated 9 ಫೆಬ್ರುವರಿ 2023, 5:17 IST
ಕಾರ್ಖಾನೆ ಪೇಟೆ ರಸ್ತೆಯಲ್ಲಿ ಚರಂಡಿ ಸ್ಥಿತಿ
ಕಾರ್ಖಾನೆ ಪೇಟೆ ರಸ್ತೆಯಲ್ಲಿ ಚರಂಡಿ ಸ್ಥಿತಿ   

ಚಿಕ್ಕಬಳ್ಳಾಪುರ: ಚುನಾವಣೆಯ ಈ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳಿಂದ ಪುಂಖಾನುಪುಂಖವಾಗಿ ಅಭಿವೃದ್ಧಿಯ ಮಾತುಗಳು ಹೊರ ಬೀಳುತ್ತಿವೆ. ಆದರೆ ಒಮ್ಮೆ ಚಿಕ್ಕಬಳ್ಳಾಪುರದ ಬಡಾವಣೆಗಳನ್ನು ಸುತ್ತಿದರೆ ಚರಂಡಿಯ ದುರ್ನಾತ ಅಭಿವೃದ್ಧಿಯ ಮಾತುಗಳನ್ನು ಅಣಕಿಸುತ್ತದೆ.

ಇದೇನು ಜಿಲ್ಲಾ ಕೇಂದ್ರದ ಸ್ಥಿತಿಯೇ ಹೀಗಿದೆ ಎನಿಸುತ್ತದೆ. ನಗರದ ಬಹಳಷ್ಟು ಕಡೆಗಳಲ್ಲಿರುವ ಚರಂಡಿಗಳಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಲೇ ಇಲ್ಲ. ಕೊಳಚೆಯನ್ನು ನೋಡಿದರೆ ಇದೇನು ಇಂದು ನೆನ್ನೆಯದಲ್ಲ, ವರ್ಷಾನುಗಟ್ಟಲೆಯಿಂದಲೂ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ ಎನ್ನುವುದು ತಿಳಿಯುತ್ತದೆ.

‘ನಗರಸಭೆಯ ಅಧಿಕಾರಿಗಳೇ ಒಮ್ಮೆ ಇಲ್ಲಿ ಬಂದು ನೋಡಿ’ ಎಂದು ಜನರು ಆಗ್ರಹಿಸುತ್ತಿದ್ದಾರೆ. ಚರಂಡಿಗಳಲ್ಲಿ ಹೂಳು ತುಂಬಿರುವುದು, ಅವ್ಯವಸ್ಥೆಯ ಬಗ್ಗೆ ಮತ್ತು ಮಳೆಗಾಲದ ಸಂದರ್ಭದಲ್ಲಿ ತುಂಬಿರುವ ಚರಂಡಿಗಳು ಉಂಟು ಮಾಡುವ ಅಧ್ವಾನಗಳ ಬಗ್ಗೆ, ಮಳೆಗಾಲದ ಸಿದ್ಧತೆಗಳನ್ನು ನಗರಸಭೆ ನಿರ್ಲಕ್ಷಿಸಿದೆ ಎನ್ನುವ ಬಗ್ಗೆ ಈ ಹಿಂದಿನಿಂದಲೂ ‘ಪ್ರಜಾವಾಣಿ’ ಸರಣಿ ವರದಿಗಳನ್ನು ಮಾಡಿದೆ. ಯಾವ ವರದಿ ಮಾಡಲಿ, ಯಾರು ಏನೇ ಹೇಳಲಿ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತಿದೆ ನಗರಸಭೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡೆ.

ADVERTISEMENT

ದರ್ಗಾ ಮೊಹಲ್ಲಾ, ಕಾರ್ಖಾನೆ ಪೇಟೆ, ಕ್ರೀಡಾಂಗಣದ ಮುಂಭಾಗದ ರಸ್ತೆ, ಪ್ರಶಾಂತ್‌ ನಗರ, ಭಗತ್‌ ಸಿಂಗ್ ನಗರ, ದಿನ್ನೆ ಹೊಸಹಳ್ಳಿ ರಸ್ತೆ, ಜೈಭೀಮ್ ನಗರ, ಜಿಲ್ಲಾ ಆಸ್ಪತ್ರೆ ಮುಂಭಾಗದ ಪ್ರದೇಶ, ನಕ್ಕಲಕುಂಟೆ, ಗಂಗನಮಿದ್ದೆ ರಸ್ತೆ–ಹೀಗೆ ನಗರದ ಬಹುತೇಕ ಬಡಾವಣೆಗಳು ರಸ್ತೆಗಳಲ್ಲಿ ಚರಂಡಿ ಅವ್ಯವಸ್ಥೆಯ ದರ್ಶನವಾಗುತ್ತದೆ.

ಜಿಲ್ಲೆಯ ಜನರ ಆರೋಗ್ಯಕ್ಕೆ ಕಾವಲು ಎನ್ನುವಂತಿರುವ ಜಿಲ್ಲಾ ಆಸ್ಪತ್ರೆಯ ಅಕ್ಕಪಕ್ಕ, ಮುಂಭಾಗದಲ್ಲಿಯೇ ತೆರೆದ ಚರಂಡಿಗಳು ಕೊಳಚೆಯಿಂದ ತುಂಬಿ ತುಳುಕುತ್ತಿವೆ. ನಗರಸಭೆಯ ವ್ಯಾಪ್ತಿಯ ಯಾವುದೇ ವಾರ್ಡ್‌ಗೆ ಹೋದರೂ ಸ್ವಚ್ಛವಾಗಿರುವ ಚರಂಡಿ ಕಾಣುವುದು ಅಪರೂಪ ಎನ್ನುವ ಸ್ಥಿತಿ ಇದೆ. ನಗರಸಭೆಯ ನಿರ್ಲಕ್ಷ್ಯದಿಂದ ಚರಂಡಿಗಳು ಬಾಯಿ ಹೊಲಿದುಕೊಂಡು, ಸತ್ತು ಮಲಗಿದಂತಿವೆ. ಕಾಲ ಕಾಲಕ್ಕೆ ಹೂಳೆತ್ತಿ ಮಳೆ ನೀರಿಗೆ ಸರಾಗ ಹರಿವು ಕಲ್ಪಿಸಿಕೊಡಬೇಕಾದವರು ತಮ್ಮ ಕರ್ತವ್ಯ ಮರೆತಿದ್ದಾರೆ ಎನ್ನುವುದು ಸಾರ್ವಜನಿಕರ ಆಕ್ರೋಶದ ನುಡಿ.

ಅವೈಜ್ಞಾನಿಕ ಕಾಮಗಾರಿ, ಸ್ವಚ್ಛತೆ ನಿರ್ವಹಣೆ ಕೊರತೆ, ಅಧಿಕಾರಿಗಳ ಅಸಡ್ಡೆ, ನಾಗರಿಕರ ಬೇಜವಾಬ್ದಾರಿತನ...ಈ ಎಲ್ಲವೂ ಚರಂಡಿ ಅವ್ಯವಸ್ಥೆಗಳಲ್ಲಿ ಮಿಳಿತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ಒಂದೂವರೆ ದಶಕ ಪೂರೈಸಿದೆ. ಅಭಿವೃದ್ಧಿಯ ಮಾತುಗಳು ಮಾತ್ರ ಹೊಳೆಯ ನೀರಿನಂತೆ ಜನಪ್ರತಿನಿಧಿಗಳ ಬಾಯಲ್ಲಿ ಹರಿಯುತ್ತಲೇ ಇದೆ. ಅಭಿವೃದ್ಧಿ ಮಾತುಗಳನ್ನು ಚಿಕ್ಕಬಳ್ಳಾಪುರ ನಗರದ ಚರಂಡಿಗಳು ಅಣಕಿಸುತ್ತಿವೆ.

ಸ್ಲ್ಯಾಬ್‌ಗಳೂ ಇಲ್ಲ: ನಗರದಲ್ಲಿರುವ ತೆರೆದ ಚರಂಡಿಗಳಿಗೆ ಸ್ಲ್ಯಾಬ್‌ಗಳು ಸಹ ಅಳವಡಿಸಿಲ್ಲ. ಎಷ್ಟೊ ವರ್ಷಗಳ ಹಿಂದೆ ಅಳವಡಿಸಿದ್ದ ಸ್ಲ್ಯಾಬ್‌ಗಳು ಮುರಿದು ಬಿದಿದ್ದರೂ ಅವುಗಳನ್ನು ತೆರವುಗೊಳಿಸುವ ಮತ್ತು ಹೊಸದಾಗಿ ಸ್ಲ್ಯಾಬ್‌ಗಳನ್ನು ಅವಡಿಸಲು ನಗರಸಭೆ ಮುಂದಾಗಿಲ್ಲ. ಸ್ಲ್ಯಾಬ್‌ಗಳು ಮುರಿದು ಚರಂಡಿಯ ಒಳಗೇ ಬಿದ್ದಿವೆ! ಸದಾ ಜನಜಂಗುಳಿಯ ಮತ್ತು ವ್ಯಾಪಾರ ವಹಿವಾಟಿಗೆ ಹೆಸರು ವಾಸಿಯಾಗಿರುವ ಕಾರ್ಖಾನೆ ಪೇಟೆ ರಸ್ತೆಯ ಅಂಗಡಿಗಳಿಗೆ ವ್ಯಾಪಾರಕ್ಕೆ ಬರುವ ಜನರು ಮೂಗಿ ಮುಚ್ಚಿ ನಡೆಯಬೇಕಾಗಿದೆ.

ಕೆಲವು ಕಡೆಗಳಲ್ಲಿ ಚರಂಡಿಗಳೇ ಕಸಕಡ್ಡಿಗಳಿಂದ ಮುಚ್ಚಿ ಹೋಗಿವೆ. ನಗರಸಭೆಯು ಚರಂಡಿಗಳನ್ನು ಸ್ವಚ್ಛಗೊಳಿಸಿ ಎಷ್ಟೊ ವರ್ಷಗಳಾಗಿವೆ ಎನ್ನುವುದನ್ನು ಇದು ಎತ್ತಿ ತೋರಿಸುತ್ತದೆ. ಕಾರ್ಖಾನೆ ಪೇಟೆ ರಸ್ತೆ, ಎಚ್‌.ಎಸ್.ಗಾರ್ಡನ್ ರಸ್ತೆಯಲ್ಲಿ ಇಂತಹ ಮುಚ್ಚಿದ ಚರಂಡಿಗಳನ್ನು ಕಾಣಬಹುದು.

ಬೇಸಿಗೆಯಲ್ಲಿ ಸೊಳ್ಳೆಗಳ ಹೆಚ್ಚಳ: ಹೀಗೆ ಕೊಳಚೆಯಿಂದ ತುಂಬಿ ತುಳುಕುತ್ತಿರುವ ಚರಂಡಿಗಳು ಬೇಸಿಗೆಯಲ್ಲೊಂದು ಮಳೆಗಾಲದಲ್ಲೊಂದು ರೀತಿ ಜನರಿಗೆ ಸಮಸ್ಯೆ ಆಗುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಬೇಸಿಗೆ ಬರಲಿವೆ. ಬೇಸಿಗೆಯ ಸಮಯದಲ್ಲಿ ಕೊಳಚೆಯನ್ನು ಸೊಳ್ಳೆಗಳ ಉತ್ಪತ್ತಿಯು ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗಲಿದೆ ಎನ್ನುವ ಭಯ ನಾಗರಿಕರಲ್ಲಿದೆ.

ಚರಂಡಿ ಸ್ವಚ್ಛತೆ ಮರೆತ ನಗರಸಭೆ

ಮೋರಿಗಳು ಪಾಚಿ ಕಟ್ಟುತ್ತಿವೆ. ಮಳೆ ಸುರಿದರೆ ಹುಳುಗಳು ರಸ್ತೆಗೆ ಹರಿದುಬರುತ್ತವೆ. ಮಳೆಗಾಲದಲ್ಲಿ ಪರಿಸ್ಥಿತಿ ತೀರಾ ಅಧ್ವಾನವಾಗಿರುತ್ತದೆ. ಈಗ ಬೇಸಿಗೆಯಲ್ಲಿಯೂ ಸೊಳ್ಳೆಗಳ ಕಾಟ ಹೆಚ್ಚಲಿದೆ. ನಗರಸಭೆಯುವರು ಚರಂಡಿಗಳನ್ನು ಸ್ವಚ್ಛಗೊಳಿಸುವುದನ್ನೇ ಮರೆತಿದ್ದಾರೆ ಎನ್ನುತ್ತಾರೆ ನಾಗರಿಕ ಮಂಜುನಾಥ್.

ಅಭಿವೃದ್ಧಿ; ಆತ್ಮಸಾಕ್ಷಿಯ ಮಾತಾಗಿರಲಿ

ನಗರದಲ್ಲಿ ಸ್ವಚ್ಛತೆ ತೀರಾ ಕಳಪೆ ಮಟ್ಟದಲ್ಲಿ ಇದೆ. ಬಹಳಷ್ಟು ಬಡಾವಣೆಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿವೆ. ಜನಪ್ರತಿನಿಧಿಗಳು ಮಾತೆತ್ತಿದರೆ ಚಿಕ್ಕಬಳ್ಳಾಪುರ ಆ ರೀತಿಯಲ್ಲಿ ಅಭಿವೃದ್ಧಿ ಆಗಿದೆ ಈ ರೀತಿಯಲ್ಲಿ ಅಭಿವೃದ್ಧಿ ಆಗಿದೆ ಎನ್ನುತ್ತಾರೆ. ಹೀಗೆ ಹೇಳುವವರು ಒಮ್ಮೆ ನಗರದವನ್ನು ಸುತ್ತಲಿ. ಆ ನಂತರ ಆತ್ಮಸಾಕ್ಷಿಯಿಂದ ಈ ಮಾತು ಹೇಳಲಿ ಎನ್ನುತ್ತಾರೆ ನಾಗರಿಕ ರಾಜಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.