ADVERTISEMENT

ಚಿಂತಾಮಣಿ: 1.75 ಲಕ್ಷ ಮಹಿಳೆಯರ ಪ್ರಯಾಣ

ಮಹಿಳೆ ಸಬಲೀಕರಣದೊಂದಿಗೆ ಕೆಎಸ್‌ಆರ್‌ಟಿಸಿಗೂ ‘ಶಕ್ತಿ’ । ಎರಡು ವರ್ಷಕ್ಕೆ ನಿಗಮಕ್ಕೆ ₹73.27 ಲಕ್ಷ ಆದಾಯ

ಎಂ.ರಾಮಕೃಷ್ಣಪ್ಪ
Published 16 ಜುಲೈ 2025, 5:14 IST
Last Updated 16 ಜುಲೈ 2025, 5:14 IST
ಚಿಂತಾಮಣಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್ ಹತ್ತಲು ಮುನ್ನುಗ್ಗುತ್ತಿರುವ ಮಹಿಳೆಯರು
ಚಿಂತಾಮಣಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್ ಹತ್ತಲು ಮುನ್ನುಗ್ಗುತ್ತಿರುವ ಮಹಿಳೆಯರು   

ಚಿಂತಾಮಣಿ: ‘ಶಕ್ತಿ’ ಯೋಜನೆ ಜಾರಿ ಬಳಿಕ ರಾಜ್ಯದಲ್ಲಿ 500 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು, ತಾಲ್ಲೂಕಿನಲ್ಲಿ ಎರಡು ವರ್ಷದ ಅವಧಿಯಲ್ಲಿ ₹1.75 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ₹73.27 ಆದಾಯ ಬಂದಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯೂ ಮಹಿಳಾ ಓಡಾಡದ ಜತೆಗೆ ನಷ್ಟದಲ್ಲಿದ್ದ ನಿಗಮಕ್ಕೂ ಶಕ್ತಿ ತುಂಬಿದೆ.

ಶಕ್ತಿ ಯೋಜನೆ ಆರಂಭವಾಗಿ ಜೂನ್ 11ಕ್ಕೆ ಎರಡು ವರ್ಷ ಪೂರೈಸಿದೆ. 2023ರ ಜೂನ್ 11 ರಿಂದ 2025 ರ ಜುಲೈ 11 ರವರೆಗೆ ತಾಲ್ಲೂಕಿನಲ್ಲಿ 1,75,61,883 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಅದರ ಒಟ್ಟು ಟಿಕೆಟ್ ಮೌಲ್ಯ ₹73,27,47,810.

ADVERTISEMENT

ಶಕ್ತಿ ಯೋಜನೆಯ ಆರಂಭಕ್ಕೆ ಮುಂಚೆ ದಿನಕ್ಕೆ ಸರಾಸರಿ ₹13-14 ಲಕ್ಷ ಸಂಗ್ರಹ ಆಗುತ್ತಿತ್ತು. ಶಕ್ತಿ ಯೋಜನೆಯ ಜಾರಿ ನಂತರ ದಿನಕ್ಕೆ ₹23-25 ಲಕ್ಷ ಸಂಗ್ರಹ ಆಗುತ್ತಿದೆ. ಹೀಗಾಗಿ ಶಕ್ತಿ ಯೋಜನೆಯು ಮಹಿಳೆಯರಿಗೆ ಶಕ್ತಿ ತುಂಬುವುದರ ಜತೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಲವರ್ಧನೆಗೂ ಶಕ್ತಿ ತುಂಬುತ್ತಿದೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ಶಕ್ತಿ ಯೋಜನೆಯ ಆರಂಭವಾದ ಹೊಸದರಲ್ಲಿ ಹಲವು ಸಮಸ್ಯೆ ಉದ್ಭವಿಸಿದವು. ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಬಸ್‌ ಮತ್ತು ಸಿಬ್ಬಂದಿಯ ಕೊರತೆಯಿಂದ ಬೇಡಿಕೆಗೆ ಅನುಗುಣವಾಗಿ ಟ್ರಿಪ್ ಕಳುಹಿಸುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದರು. ಶಕ್ತಿ ಯೋಜನೆಯ ನಂತರ ಚಿಂತಾಮಣಿ ಡಿಪೊಗೆ 16 ಹೊಸಬಸ್ ಮತ್ತು ಬಿಎಂಟಿಸಿಯಿಂದ 3 ಬಸ್ ಸೇರಿ ಒಟ್ಟು 19 ಬಸ್‌ಗಳನ್ನು ನೀಡಲಾಗಿದೆ.

ಚಿಂತಾಮಣಿಯಿಂದ ಹಾಸನಕ್ಕೆ ಎರಡು ಬೆಂಗಳೂರಿನ ಟಿನ್ ಪ್ಯಾಕ್ಟರಿಗೆ ನಾಲ್ಕು , ರಾಯಚೂರು, ಸಿಗಂದೂರು, ತಿರುಪತಿ ತಲಾ ಒಂದರಂತೆ 9 ಹೊಸ ಮಾರ್ಗ ಆರಂಭಿಸಲಾಗಿದೆ. ಬೆಂಗಳೂರು-ಹೊಸಕೋಟೆ, ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ, ನೆರೆಯ ಜಿಲ್ಲಾ ಕೇಂದ್ರ ಕೋಲಾರಕ್ಕೂ ಸಮರ್ಪಕವಾಗಿ ಬಸ್ ಗಳು ಸಂಚರಿಸುತ್ತಿವೆ.

ಅಂಕಿ ಅಂಶಗಳು

1,75,61,883- ಎರಡು ವರ್ಷದಲ್ಲಿ ಪಯಣಿಸಿದ ಮಹಿಳೆಯರ ಸಂಖ್ಯೆ 

₹73,27,47,810- ಪ್ರಯಾಣದ ಟಿಕೆಟ್ ಮೌಲ್ಯ

₹23-25 ಲಕ್ಷ- ದಿನಕ್ಕೆ ಸರಾಸರಿ ಆದಾಯ

ಚಿಂತಾಮಣಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್ ಹತ್ತಲು ಮುನ್ನುಗ್ಗುತ್ತಿರುವ ಮಹಿಳೆಯರು

ಗ್ರಾಮೀಣ ಭಾಗಕ್ಕೆ ಸಂಪರ್ಕ

ಸಂಸ್ಥೆ ಆಯ್ಕೆ ಮಾಡಿದ್ದ 60 ಸಿಬ್ಬಂದಿ ಮತ್ತು ಖಾಸಗಿಯಾಗಿ 78 ಚಾಲಕರನ್ನು ಚಿಂತಾಮಣಿ ಡಿಪೊಗೆ ನಿಯೋಜಿಸಲಾಯಿತು. ಶಕ್ತಿ ಯೋಜನೆ ಜಾರಿಯ ನಂತರ 40-50 ಹಳ್ಳಿಗಳು ಸೇರಿದಂತೆ ತಾಲ್ಲೂಕಿನ ಬಹುತೇಕ ಎಲ್ಲ ಹಳ್ಳಿಗಳಿಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗಗಳ ಹಳ್ಳಿಗಳಿಗೆ ಹೊಸದಾಗಿ 60 ಟ್ರಿಪ್ ಬಸ್ ಸಂಚರಿಸುತ್ತಿವೆ ಎಂದು ಡಿಪೋ ವ್ಯವಸ್ಥಾಪಕಿ ಸರಿತಾ ‘ಪ್ರಜಾವಾಣಿ’ಗೆ ತಿಳಿಸಿದರು. ಬಸ್‌ ಹೆಚ್ಚಿಸಿ; ನೂಕು ನುಗ್ಗಲು ತಪ್ಪಿಸಿ ಶಕ್ತಿ ಯೋಜನೆಯು ಮಹಿಳೆಯರ ಪಾಲಿಗೆ ವರದಾನವಾಗಿದೆ. ಯೋಜನೆಯಡಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಎರಡು ಪಟ್ಟಾಗಿದೆ. ಇದರಿಂದಾಗಿ ಸರ್ಕಾರಿ ಬಸ್ ಗಳಲ್ಲಿ ಹೆಚ್ಚಿನ ನೂಕುನುಗ್ಗುಲು ಇರುತ್ತದೆ. ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ಹಾಗೂ ಯಾತ್ರಾಸ್ಥಗಳಿಗೆ ಸಂಚರಿಸುವ ಬಸ್ ಗಳಿಗೆ ಹೆಚ್ಚಿನ ನೂಕು ನುಗ್ಗಲು ಇರುತ್ತದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ನೂಕು ನುಗ್ಗಲು ತಪ್ಪಲಿದೆ ಎಂದು ಪ್ರಯಾಣಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ರಾಂತಿಕಾರಿ ಯೋಜನೆ

ಆರ್ಥಿಕ ಸಮಸ್ಯೆ ಹಾಗೂ ಆರ್ಥಿಕ ಸ್ವಾತಂತ್ರ್ಯ ಇಲ್ಲದೆ ಮಹಿಳೆಯರು ಹೊರಗೆ ಸಂಚರಿಸಲು ತಿಣಕಾಡುತ್ತಿದ್ದರು. ಮಹಿಳೆಯುರು ಉದ್ಯೋಗ ಶಿಕ್ಷಣ ಯಾತ್ರಾಸ್ಥಳಗಳಿಗೆ ಸಂಚರಿಸಲು ಶಕ್ತಿ ಯೋಜನೆ ವರದಾನವಾಗಿದೆ. ಸ್ತ್ರೀ ಸ್ವಾವಲಂಬನೆಯ ಹಿನ್ನಲೆಯಲ್ಲಿ ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ. ಪೂಜಾ ಉದ್ಯೋಗಸ್ಥ ಮಹಿಳೆ ಕೈ ಚಾಚುವುದು ತಪ್ಪಿದೆ ತವರು ಮನೆಗೆ ಹೋಗಿಬರಬೇಕಾದರೂ ಹಣಕಾಸಿನ ತೊಂದರೆ ಎದುರಾಗುತ್ತಿತ್ತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಪುರುಷರ ಮುಂದೆ ಕೈ ಚಾಚಬೇಕಾಗಿತ್ತು. ಶಕ್ತಿ ಯೋಜನೆಯು ಮಹಿಳೆಯರ ಆತ್ಮ ಗೌರವ ಮತ್ತು ಸ್ವಾವಲಂಬನೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಮಲಕ್ಷ್ಮಮ್ಮ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.