ಶಿಡ್ಲಘಟ್ಟ: ಪಪ್ಪಾಯ ಮತ್ತು ಮಾವು ಬೆಳೆಗಳನ್ನು ಕೃಷಿ ಅರಣ್ಯ ವ್ಯವಸ್ಥೆಯಲ್ಲಿ ಬೆಳೆದರೆ ಹಲವಾರು ಪ್ರಯೋಜನ ಸಿಗುತ್ತವೆ. ಇದು ಅವರ ಆದಾಯ ಹೆಚ್ಚಿಸಲು, ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ಒಂದೇ ಬೆಳೆಯ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಹಾಯ ಮಾಡುತ್ತಿದೆ. ಈ ವ್ಯವಸ್ಥೆ ಮಣ್ಣಿನ ಫಲವತ್ತತೆ ಸುಧಾರಿಸಲು ಮತ್ತು ಮಣ್ಣಿನ ಸವೆತ ಕಡಿಮೆ ಮಾಡಲು ಸಹಾಯ ಮಾಡುತ್ತಿದೆ.
ಈ ರೀತಿಯ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಯನ್ನು ತಾಲ್ಲೂಕಿನ ಕಂಬದಹಳ್ಳಿಯ ಕೃಷಿಕ ಸುರೇಂದ್ರಗೌಡ ಕೂಡ ಅಳವಡಿಸಿಕೊಂಡಿದ್ದಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಇತರರಿಗೂ ಈ ರೀತಿಯ ಲಾಭ ಪಡೆಯುವಂತೆ ತಿಳಿಸುತ್ತಿದ್ದಾರೆ. ರೈತ ಸುರೇಂದ್ರಗೌಡ ಅವರು, ಏಳು ವರ್ಷಗಳ ವಯಸ್ಸಿನ 800 ಮಾವಿನ ಮರಗಳ ನಡುವೆ 1,000 ಪಪ್ಪಾಯ ಗಿಡಗಳನ್ನು ನೆಟ್ಟಿದ್ದಾರೆ.
ಪಪ್ಪಾಯ ಮತ್ತು ಮಾವು, ಕೃಷಿ ಅರಣ್ಯ ವ್ಯವಸ್ಥೆಯಿಂದ ಉತ್ಪಾದನೆ ಹೆಚ್ಚುತ್ತದೆ. ಸಂಪನ್ಮೂಲಗಳು ಮತ್ತು ಜಾಗದ ಸಮರ್ಥ ಬಳಕೆ ಇದಕ್ಕೆ ಕಾರಣ. ಪಪ್ಪಾಯ ಗಿಡಗಳು ಮಾವಿನ ಮರಗಳ ನಡುವಿನ ಜಾಗವನ್ನು ಅಂದರೆ ಬಳಸದೆ ಇರುವ ಜಾಗವನ್ನು ಬಳಸಿಕೊಳ್ಳುತ್ತವೆ.
ಮಾವಿನ ಮರಗಳು ಗಾಳಿತಡೆಯಾಗಿ ಕಾರ್ಯನಿರ್ವಹಿಸುತ್ತವೆ, ಬಲವಾದ ಗಾಳಿ ಮತ್ತು ಭಾರೀ ಮಳೆಯಿಂದ ಪಪ್ಪಾಯಿ ಗಿಡಗಳನ್ನು ರಕ್ಷಿಸುತ್ತವೆ. ಪಪ್ಪಾಯಿ ಮತ್ತು ಮಾವಿನ ಕೃಷಿ ಅರಣ್ಯ ವ್ಯವಸ್ಥೆಯು ಪರಾಗಸ್ಪರ್ಶಕ, ಪ್ರಯೋಜನಕಾರಿ ಕೀಟಗಳನ್ನು ಆಕರ್ಷಿಸುವ ವೈವಿಧ್ಯಮಯ ಆವಾಸಸ್ಥಾನವನ್ನು ಸೃಷ್ಟಿಸುತ್ತದೆ. ಈ ಎರಡು ಬೆಳೆಗಳನ್ನು ಒಂದೇ ವ್ಯವಸ್ಥೆಯಲ್ಲಿ ಸಂಯೋಜಿಸುವುದರಿಂದ ರೈತರಿಗೆ ವರ್ಷವಿಡೀ ವೈವಿಧ್ಯಮಯ ಆದಾಯದ ಮೂಲವನ್ನು ಒದಗಿಸುತ್ತದೆ. ಪಪ್ಪಾಯ ಗಿಡಗಳು ಮಣ್ಣಿನ ಆರೋಗ್ಯ ಸುಧಾರಿಸಲು ಸಹಾಯಕ ಎಂದು ರೈತ ಸುರೇಂದ್ರಗೌಡ ವಿವರಿಸಿದರು.
ಈ ಹಿಂದೆ ಬಹುವಾರ್ಷಿಕ ಬೆಳೆಗಳ ನಡುವೆ ಹೆಚ್ಚಿನ ಅಂತರ ಇಲ್ಲದಂತೆ ಒತ್ತಾಗಿ ನೆಡಲಾಗುತ್ತಿತ್ತು. ರೆಂಬೆ ಕೊಂಬೆಗಳು ಹರಡಿ ಬೇರೇನು ಬೆಳೆಯಲು ಜಾಗವೂ ಇರುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ರೈತರು ಸಾಕಷ್ಟು ಜಾಗ ಬಿಟ್ಟು ಸಾಲು ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಬೆಳೆಗಳ ನಡುವಿನ ಜಾಗದಲ್ಲಿ ಮೂಲ ಬೆಳೆಗಳಿಗೆ ಹೊಂದಿಕೊಂಡು ಬೆಳೆಯುವಂತ ಬೆಳೆಗಳನ್ನು ಮಿಶ್ರ ಬೆಳೆಗಳನ್ನಾಗಿ ಬೆಳೆಯಲು ರೈತ ಮುಂದಾಗಿದ್ದಾರೆ. ಇದರಿಂದ ಜಾಗದ ಸದ್ಬಳಕೆ, ನೀರು, ಗೊಬ್ಬರ, ಶ್ರಮದ ಮಿತ ಬಳಕೆ ಆಗಲಿದೆ. ಸಿಗುವ ಆದಾಯ ಹೆಚ್ಚಾಗುತ್ತದೆ.
ಮುಖ್ಯವಾಗಿ ಹವಾಮಾನ ವೈಪರೀತ್ಯ, ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತದಿಂದ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆಯಾದರೂ ರೈತನ ಕೈ ಹಿಡಿಯುವ ಅವಕಾಶಗಳು ಹೆಚ್ಚುತ್ತಿವೆ. ಹಾಗಾಗಿ ಮಾವು, ಗೋಡಂಬಿ, ನೇರಳೆ ಮುಂತಾದ ತೋಟಗಾರಿಕೆ ಬೆಳೆಗಳ ನಡುವೆ ಮಿಶ್ರ ಬೆಳೆಗಳನ್ನು ಬೆಳೆಯುವ ಪ್ರಮಾಣ, ರೈತರ ಸಂಖ್ಯೆಯೂ ಹೆಚ್ಚುತ್ತಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2,158 ಹೆಕ್ಟೇರ್‌ನಲ್ಲಿ ಮಾವನ್ನು ಬೆಳೆಯಲಾಗುತ್ತಿದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕಿ ಮಂಜುಳ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.