
ಶಿಡ್ಲಘಟ್ಟ: ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯ ಗುಟ್ಟಾಂಜನೇಯ ದೇವಾಲಯದ ಆವರಣದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ವಿಚಾರ ಸಂಕಿರಣ ಮತ್ತು ಸರ್ವ ಸದಸ್ಯರ ಸಭೆಯನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
ದಸಂಸ ಹಿರಿಯ ಮುಖಂಡ ಜಂಗಮಪ್ಪ ಮಾತನಾಡಿ, ‘ಸಮಾಜದಲ್ಲಿ ಶೋಷಿತರು ಮತ್ತು ತುಳಿತಕ್ಕೆ ಒಳಗಾದ ಜನರ ಧ್ವನಿಯಾಗಿ ದಲಿತ ಸಂಘರ್ಷ ಸಮಿತಿ ಕಾರ್ಯನಿರ್ವಹಿಸಬೇಕಿದೆ’ ಎಂದು ಹೇಳಿದರು.
ನೊಂದವರ ಪರ ಹೋರಾಟ ನಡೆಸುವುದು ಸಂಘಟನೆಯ ಮುಖ್ಯ ಗುರಿಯಾಗಿರಬೇಕು. ಜನಸಾಮಾನ್ಯರ ನಡುವೆ ಕೆಲಸ ಮಾಡುವಾಗ ವ್ಯಕ್ತಿಗೆ ಪದವಿಗಿಂತ ಪ್ರಾಮಾಣಿಕ ಸೇವೆ ಬಹು ಮುಖ್ಯ. ಆ ನಿಟ್ಟಿನಲ್ಲಿ ದಸಂಸ ಪದಾಧಿಕಾರಿಗಳು ಸಂಘಟನೆ ಬಲಪಡಿಸುವ ಜೊತೆಗೆ ನೊಂದವರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ದಸಂಸ ಜಿಲ್ಲಾ ಸಂಚಾಲಕ ಜಿ.ವಿ.ಆನಂದ್ ಮಾತನಾಡಿ, ‘ಸಮಾಜದಲ್ಲಿರುವ ಎಲ್ಲ ಜಾತಿ ಮತ್ತು ಧರ್ಮಗಳ ಬಡವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಶ್ರಮಿಸಿದ್ದು, ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಆ ಮೂಲಕ ಆದರ್ಶ ಸಮಾಜ ನಿರ್ಮಿಸಬೇಕು’ ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಮಟ್ಟದ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.
ನೂತನ ತಾಲ್ಲೂಕು ಘಟಕ: ತಾಲ್ಲೂಕು ಸಂಚಾಲಕರಾಗಿ ಲಕ್ಕೇನಹಳ್ಳಿ ವೆಂಕಟೇಶ್, ಶಿಸ್ತು ಮತ್ತು ಆಂತರಿಕ ಸಂಚಾಲಕರಾಗಿ ಹುಜಗೂರು ವೆಂಕಟೇಶ್, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಂಚಾಲಕರಾಗಿ ನರಸಿಂಹಪ್ಪ (ಎನ್.ಟಿ.ಆರ್), ಪೌರ ಮತ್ತು ಕಾರ್ಮಿಕರ ಸಂಚಾಲಕರಾಗಿ ಚನ್ನಕೇಶವ, ಸಂಘಟನಾ ಸಂಚಾಲಕರಾಗಿ ಬಸಪ್ಪ, ನಾರಾಯಣಸ್ವಾಮಿ, ಖಜಾಂಚಿಯಾಗಿ ಅನಿಲ್, ಸಾಂಸ್ಕೃತಿಕ ವಿಭಾಗದ ಸಂಚಾಲಕರಾಗಿ ನರಸಿಂಹಪ್ಪ, ನರಸಿಂಹಮೂರ್ತಿ, ಮಾಧ್ಯಮ ಸಂಚಾಲಕರಾಗಿ ಎಲ್.ಮುನಿರಾಜು ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಎ.ಚಲಪತಿ, ಕೋಟಪ್ಪ, ವೆಂಕಟನಾರಾಯಣಪ್ಪ, ಜಿಲ್ಲಾ ಸಮಿತಿ ಸದಸ್ಯ ರಾಮಯ್ಯ, ವೆಂಕಟೇಶ್, ಕೃಷ್ಣಪ್ಪ, ಎಲ್.ಎನ್.ನರಸಿಂಹಯ್ಯ, ನರಸಿಂಹಪ್ಪ, ಜಯಕುಮಾರ್, ನಡಿಪಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.