
ಶಿಡ್ಲಘಟ್ಟ: ನಗರಸಭೆ ವ್ಯಾಪ್ತಿಯಲ್ಲಿನ ಆಸ್ತಿಗಳ ಇ– ಖಾತಾ ಕಡತಗಳ ವಿಲೇವಾರಿ ವಿಳಂಬ ಹಾಗೂ ಸೂಕ್ತವಾಗಿ ವಿಲೇವಾರಿ ಮಾಡದೆ ನಾಗರಿಕರನ್ನು ಅಲೆದಾಡಿಸುತ್ತಿರುವ ಬಗ್ಗೆ ಶಾಸಕ ಬಿ.ಎನ್.ರವಿಕುಮಾರ್ ಅವರು ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರ ಮುಂದೆ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಣ ನೀಡಿ ಮಧ್ಯವರ್ತಿಗಳು ಮತ್ತು ನಗರಸಭೆಯ ಕೆಲ ಸದಸ್ಯರ ಮೂಲಕ ಸಲ್ಲಿಕೆಯಾಗುವ ಇ–ಖಾತಾ ಕಡತಗಳನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ. ನೇರವಾಗಿ ಆಸ್ತಿ ಮಾಲಿಕರೆ ಇ–ಖಾತೆಗಾಗಿ ಅರ್ಜಿ ಸಲ್ಲಿಸಿದರೆ ನೂರೊಂದು ನೆಪ ಹೇಳಿ ಕಡತ ವಿಲೇ ಮಾಡುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕರು ನಗರಸಭೆ ಕಚೇರಿಗೆ ಭೇಟಿ ನೀಡಿದ್ದರು.
ಅಧ್ಯಕ್ಷರು, ಕೆಲ ಸದಸ್ಯರು ಹಾಗೂ ಪೌರಾಯುಕ್ತರೊಂದಿಗೆ ಕಡತಗಳ ವಿಲೇವಾರಿಯ ಸಧ್ಯದ ಸ್ಥಿತಿ ಗತಿ, ಎಷ್ಟು ವಿಲೇವಾರಿ ಆಗಿವೆ, ಆಗದೆ ಬಾಕಿ ಉಳಿದ ಕಡತಗಳೆಷ್ಟು? ವಿಲೇ ಆಗದೆ ಬಾಕಿ ಉಳಿಯಲು ಕಾರಣಗಳೇನು ಎಂಬುದರ ಬಗ್ಗೆ ಚರ್ಚಿಸಿದರು.
ಯಾವ ಮಾನದಂಡಗಳ ಆಧಾರದಲ್ಲಿ ಇ–ಖಾತಾ ಕಡತಗಳ ವಿಲೇವಾರಿ ಮಾಡುತ್ತಿದ್ದೀರಿ ಎಂಬ ಮಾಹಿತಿಯನ್ನು ಅಧಿಕಾರಿಗಳ ಬಳಿ ಪಡೆದುಕೊಂಡರು. ಸಾರ್ವಜನಿಕರಿಂದ ಕೇಳಿ ಬರುತ್ತಿರುವ ದೂರುಗಳ ಕುರಿತಾಗಿಯೂ ಚರ್ಚಿಸಿದರು.
ಮಧ್ಯವರ್ತಿಗಳು ಹಾಗೂ ನಗರಸಭೆಯ ಕೆಲ ಸದಸ್ಯರ ಮೂಲಕ ಸಲ್ಲಿಕೆಯಾಗುವ ಕಡತಗಳನ್ನು ಮಾತ್ರ ವಿಲೇ ಮಾಡಲಾಗುತ್ತಿದೆ ಎನ್ನುವ ದೂರುಗಳು ಮತ್ತೆ ಬರದಂತೆ ಎಚ್ಚೆತ್ತು ಕೆಲಸ ಮಾಡಿ, ನಾಗರಿಕರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬೇಡಿ ಎಂದು ಸೂಚಿಸಿದರು.
ಪೌರಾಯುಕ್ತೆ ಜಿ.ಅಮೃತ ವಿವರ ನೀಡಿ, ಕಡತಗಳನ್ನು ನೇರವಾಗಿ ಆಸ್ತಿ ಮಾಲೀಕರೆ ತಂದು ಕೊಡಲು ಹೇಳಿದ್ದೇನೆ. ಮಧ್ಯವರ್ತಿಗಳ ಮೂಲಕ ಬರುವ ಕಡತಗಳನ್ನು ನಾವು ಸ್ವೀಕರಿಸಿಯೆ ಇಲ್ಲ ಎಂದರು.
ಸಮೀಕ್ಷೆ, ಕಂದಾಯ ವಸೂಲಿ ಇನ್ನಿತರೆ ಕಾರ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸಿದ್ದು, ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಕಡತ ವಿಲೇವಾರಿ ತಡವಾಗಲು ಕಾರಣವಾಗುತ್ತಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.